ಸಿದ್ದಾಪುರು, ಆ. 3: ಕಾಡಾನೆಗಳೆಂದರೆ ಒಂದು ರೀತಿಯ ಭಯ, ಗ್ರಾಮೀಣ ಭಾಗಗಳಲ್ಲಿನ ಜನತೆಯಂತೂ, ಕಾಡಾನೆಗಳು ಎಂದೊಡನೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಕೊಡಗಿನಲ್ಲಿ ಕಾಡಾನೆಗಳ ಉಪಟಳ ಅಷ್ಟರ ಮಟ್ಟಿಗೆ ಜನರ ನಿದ್ದೆಗೆಡಿಸಿದೆ. ಅಂತಹ ಕಾಡಾನೆಗಳನ್ನು ಕಾಡಿಗಟ್ಟಿ ಜನರಲ್ಲಿ ಭಯವನ್ನು ಹೋಗಲಾಡಿಸುವ ‘ರ್ಯಾಪಿಡ್ ರೆಸ್ಪಾನ್ಸ್’ ತಂಡವನ್ನೇ ಕಾಡಾನೆಗಳು ಬೆನ್ನಟ್ಟಿರುವ ಕಾಡಾನೆಗಳ ‘ಖದರ್’ಗೆ ಏನೆನ್ನಬೇಕು?
ಇಂತಹ ಒಂದು ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ. ಗುಹ್ಯ ಇಂಜಿಲಗೆರೆಯ ತಿರುವಿನಲ್ಲಿರುವ ಏಲ ಎಸ್ಟೇಟ್ ಎಂಬಲ್ಲಿ 6 ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಬಗ್ಗೆ ಮಾಹಿತಿ ಪಡೆದ ವೀರಾಜಪೇಟೆ ಉಪವಲಯ ಅರಣ್ಯ ಅಧಿಕಾರಿ ಕಳ್ಳಿರ ದೇವಯ್ಯ ನೇತೃತ್ವದ ರ್ಯಾಪಿಡ್ ರೆಸ್ಪಾನ್ಸ್ ತಂಡವು ಇಂಜಿಲಗೆರೆಯ ಏಲ ತೋಟ ಹಾಗೂ ಏಂಜಿಲ್ ಫೀಲ್ಡ್ ಕಾಫಿ ತೋಟಕ್ಕೆ ತೆರಳಿತು. ಈ ಸಂದರ್ಭ 6 ಕಾಡಾನೆಗಳು ಮಲಗಿದ್ದವು ಎನ್ನಲಾಗಿದ್ದು, ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ನೋಡಿದ ಕಾಡಾನೆಗಳ ಹಿಂಡು ಏಕಾಏಕಿ ತಂಡವನ್ನು ಅಟ್ಟಾಡಿಸಿಕೊಂಡು ಬಂತು ಎನ್ನಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ತಂಡದ ಸಿಬ್ಬಂದಿಗಳು ಸೋಲಾರ್ ಬೇಲಿಯನ್ನು ಲೆಕ್ಕಿಸದೇ ಎದ್ದು ಬಿದ್ದು ಓಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ದೇವಯ್ಯ ಹಾಗೂ ಇತರ ಮೂರು ಸಿಬ್ಬಂದಿ ಪಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಹೋದ ಕಾಡಾನೆಗಳಿಗೆ ಸಿಬ್ಬಂದಿ ಸಿಗದ ಕಾರಣ ಆಕ್ರೋಶಗೊಂಡ ಕಾಡಾನೆಗಳು ಕಾಫಿ ತೋಟಗಳಲ್ಲಿ ಉಪಟಳ ನಡೆಸಿ ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆÉ.