ಮಡಿಕೇರಿ, ಆ. 3: ಇತ್ತೀಚೆಗೆ ಕೆಲವು ಕಾಫಿ ತೋಟಗಳಲ್ಲಿ ಕಾಣಿಸಿಕೊಂಡ ದೈತ್ಯ ಆಫ್ರಿಕನ್ ಶಂಕು ಹುಳುವಿನ ಹಾವಳಿಯು ಮುಂಬರುವ ಮಳೆಯ ಸಂದರ್ಭದಲ್ಲಿ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಕಾಫಿ ಬೆಳೆಗಾರರು ಶಂಕು ಹುಳುವಿನ ಹಾವಳಿ ನಿಯಂತ್ರಿಸಲು ಹಲವು ಮಾರ್ಗಗಳನ್ನು ಅನುಸರಿಸಲು ಕಾಫಿ ಮಂಡಳಿ ಕೋರಿದೆ. ಬೈಟ್ ಬಳಕೆ: ಅಕ್ಕಿ ತೌಡಿನ ಬೈಟ್ ತಯಾರಿಸುವಿಕೆ 60 ಕೆ.ಜಿ. ಅಕ್ಕಿ ತೌಡಿಗೆ 160 ಗ್ರಾಂನಷ್ಟು ಲಾರ್ವಿನ್ ಮತ್ತು 300 ಮಿಲಿಯಷ್ಟು ಹರಳೆಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ನಂತರ 5 ಲೀಟರ್ ನೀರಿನಲ್ಲಿ 6 ಕೆ.ಜಿ. ಬೆಲ್ಲವನ್ನು ಕರಗಿಸಿ ತಯಾರಿಸಿದ ದ್ರಾವಣವನ್ನು ನಿಧಾನವಾಗಿ ಅಕ್ಕಿ ತೌಡಿನ ಮಿಶ್ರಣದೊಂದಿಗೆ ಸೇರಿಸಿ, ಈ ರೀತಿ ಮಾಡಿದ ಮಿಶ್ರಣವು ಅತಿಯಾಗಿ ಒಣಗಿರಲೂಬಾರದು, ತೇವವಾಗಿರಲೂಬಾರದು. ಇದನ್ನು ಒತ್ತಿದರೆ ಅಂಟಿಕೊಂಡು ಕೇಕ್ನಂತಾಗಬೇಕು. ಈ ಮಿಶ್ರಣದಿಂದ ಸುಮಾರು 150 ಗ್ರಾಂ.ನಷ್ಟು ತೂಕದ 400 ಉಂಡೆಗಳನ್ನು ತಯಾರಿಸಿ ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಇರಿಸಬೇಕು. ಈ ಮಿಶ್ರಣಕ್ಕೆ ದೈತ್ಯ ಆಫ್ರಿಕನ್ ಶಂಕು ಹುಳಗಳು ಆಕರ್ಷಿಸಲ್ಪಟ್ಟು ವಿಷಕಾರಿ ಔಷಧಿಯ ಅಂಶದಿಂದ ಸಾಯುತ್ತವೆ.
ಮೆಟಾಲ್ಟಿಹೈಡ್ ಉಂಡೆಗಳು: ಕಾಫಿ ಗಿಡಗಳ ಬೇರುಗಳ ಬುಡಗಳ ಅಥವಾ ಶಂಕು ಹುಳುವಿನ ಚಲನೆ ಕಂಡುಬಂದ ಪ್ರದೇಶಗಳಲ್ಲಿ ಶೇ. 5 ಮೆಟಾಲ್ಟಿಹೈಡ್ ಉಂಡೆಗಳನ್ನು ಸಮನಾಗಿ ಹರಡುವದು. ಬೈಟ್ಗಳನ್ನು ಸೂರ್ಯಾಸ್ತಕ್ಕೆ ಮೊದಲೇ ಹಾಕಬೇಕು. ಕಾರಣ ಶಂಕು ಹುಳುಗಳು ರಾತ್ರಿ ವೇಳೆ ತುಂಬಾ ಚುರುಕಾಗಿದ್ದು, ಆಹಾರ ಹುಡುಕಿಕೊಂಡು ತಿರುಗುತ್ತವೆ. ಮರುದಿನ ಬೆಳಿಗ್ಗೆ ಬೈಟ್ಗಳ ಸುತ್ತ ಸತ್ತಿರುವ ಶಂಕುಹುಳು ಸಂಗ್ರಹಿಸಿ ನಾಶಪಡಿಸುವದು. ಬೈಟ್ಗಳನ್ನು ತಯಾರಿಸುವಾಗ ಮತ್ತು ಹರಡುವಾಗ ಕೈಗೆ ಕವಚಗಳನ್ನು ಹಾಕಿಕೊಳ್ಳುವದು.
ವ್ಯವಸಾಯ ಕ್ರಮಗಳು: ತೋಟಗಳಲ್ಲಿ ನಿರಂತರವಾಗಿ ಈ ಶಂಕು ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವದರಿಂದ ಅದರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಕಳೆ, ಕೊಳೆತ ಮರದ ತುಂಡುಗಳು ಹಾಗೂ ಇತರ ಆಶ್ರಯದಾತ ಗಿಡಗಳ್ನು ತೆಗೆದುಹಾಕಬೇಕು. ಏಕೆಂದರೆ ಇವುಗಳು ಶಂಕು ಹುಳುಗಳ ಅಡಗುತಾಣಗಳಾಗಿವೆ. ಶಂಕು ಹುಳುಗಳ ಗುಂಪಿನ ಮೇಲೆ ಚಿಪ್ಪಿನ ಸುಣ್ಣದ ಪುಡಿ ಅಥವ ಬ್ಲೀಚಿಂಗ್ ಪುಡಿ ಅಥವಾ ಉಪ್ಪನ್ನು ಹರಡಿ ನಾಶಮಾಡುವದು.