ಮಡಿಕೇರಿ, ಆ.2: ಮಗುವನ್ನು ತಾಯಿಯ ಹಾಲಿನಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಮಹೇಂದ್ರ ಅವರು ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್‍ನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಪಂಚದಲ್ಲಿನ ಮೂರನೆಯ ಒಂದು ಭಾಗದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಒಂದರಿಂದ ಐದು ವರ್ಷದ ಶೇ.50 ರಷ್ಠು ಮಕ್ಕಳ ಮರಣಕ್ಕೆ ಅಪೌಷ್ಠಿಕತೆಯೇ ಕಾರಣವಾಗಿದೆ. ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲನ್ನು ಮಾತ್ರ ಕೊಡಬೇಕು. ಮಗು ಹುಟ್ಟಿದ ಅರ್ದ ಗಂಟೆಯೊಳಗೆ ಎದೆ ಹಾಲನ್ನು ಕೊಡಲು ಮುಂದಾಗ ಬೇಕು. ಇದರಿಂದ ಮಗುವಿಗೆ ಎಲ್ಲಾ ಪೌಷ್ಟಿಕಾಂಶ ದೊರೆತು ಆರೋಗ್ಯ ಜೀವನ ಪಡೆಯುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್.ಅಧಿಕಾರಿ ಡಾ.ನಿಲೇಶ್ ಅವರು ಮಾತನಾಡಿ 1992ರಲ್ಲಿ ಸ್ತನ್ಯಪಾನ ಕಾರ್ಯಕ್ರಮವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ದೇಶಕ್ಕೆ ಈ ಕಾರ್ಯಕ್ರಮದ ಅಗತ್ಯವಿದೆಯೇ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳ ಬದುಕನ್ನು ಗಮನಿಸಿದಾಗ ಈ ಬಗ್ಗೆ ಜಾಗೃತಿ ಮೂಡಿಸುವದು ಅತ್ಯಗತ್ಯವಾಗಿದೆ ಎಂದರು.

“ಹಣ ನೀಡಿ ಔಷಧಿಯನ್ನು ಕೊಂಡುಕೊಳ್ಳಬಹುದು. ಆದರೆ ತಾಯಿಯ ಎದೆ ಹಾಲನ್ನು ಕೊಂಡುಕೊಳ್ಳುವುದು ಅಸಾಧ್ಯ. ಆದ್ದರಿಂದ ಶಿಶು ಮರಣತಪ್ಪಿಸಲು ಕಡ್ಡಾಯವಾಗಿ ಎದೆ ಹಾಲು ಕುಡಿಸಬೇಕು ಎಂದು ಅವರು ನುಡಿದರು.”

ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಕೃಷ್ಣನಂದ ಅವರು ಮಾತನಾಡಿ ಎದೆ ಹಾಲಿನ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು. ಶಿಶುವಿನ ಬೆಳವಣಿಗೆ, ತಾಯಂದಿರ ಆರೋಗ್ಯ ಉತ್ತಮವಾಗಿರಲು ಜೊತೆಗೆ ಯಾವದೇ ರೋಗಗಳಿಂದ ದೂರವಿರಲು ಶಿಶುವಿಗೆ ಎದೆ ಹಾಲು ಕುಡಿಸುವದು ಅತ್ಯಗತ್ಯ ಎಂದು ಅವರು ಹೇಳಿದರು.

ತಾಯಿಯು ನಿರಂತರವಾಗಿ ಎದೆ ಹಾಲನ್ನು ಮಗುವಿಗೆ ಉಣಿಸುವದ ರಿಂದ ಸಕ್ಕರೆ, ಬೊಜ್ಜು, ಸ್ತನ ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ದೂರವಿರಬಹುದು. ಮಗು ಹುಟ್ಟಿದ ತಕ್ಷಣದಿಂದಲೇ ತಾಯಿಯ ಗಿನ್ನಾಲು ಮಗುವಿಗೆ ಉತ್ತಮ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿ ಹೊಂದಿ ರುತ್ತದೆ ಎಂದು ಅವರು ತಿಳಿಸಿದರು.

ತಾಯಿಯ ಹಾಲು ಮಕ್ಕಳಿಗೆ ಉತ್ಕøಷ್ಟವಾದ ಆಹಾರವಾಗಿದೆ. ಮಗು ಜನನವಾದ ಆರು ತಿಂಗಳು ತಾಯಿ ಹಾಲನ್ನು ಕಡ್ಡಾಯವಾಗಿ ಮಗುವಿಗೆ ಕೊಡುವ ಜವಾಬ್ದಾರಿ ಪ್ರತಿ ತಾಯಿಯಲ್ಲಿ ಇರಬೇಕು. 6 ತಿಂಗಳ ಕಾಲ ತಾಯಿ ಹಾಲಿನ ವಿನಃ ಬೇರೆ ಯಾವ ಆಹಾರದ ಅವಶ್ಯಕತೆ ಇರುವದಿಲ್ಲ, ಆದ್ದರಿಂದ 2 ವರ್ಷಗಳ ಕಾಲ ತಾಯಿ ತನ್ನ ಮಗುವಿಗೆ ಎದೆ ಹಾಲನ್ನು ಉಣಿಸುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ತಿಳಿಸಿದರು. ವೈದ್ಯಕೀಯ ಕಾಲೇಜಿನ ಡಾ. ರಾಮಚಂದ್ರ, ಡಾ. ಪುರುಷೋತ್ತಮ, ಡಾ.ರಾಜೇಶ್ವರಿ, ಮೇರಿ ನಾಣಯ್ಯ ಇತರರು ಇದ್ದರು.