ಕೂಡಿಗೆ, ಆ.3: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ವರ್ಷಂಪ್ರತಿಯಂತೆ ಈ ಸಾಲಿನಲ್ಲಿಯು ಜುಲೈ ಅಂತ್ಯದಲ್ಲಿ ಭರ್ತಿಯಾಗಿದ್ದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಆದರೆ, ಅಧಿಕಾರಿಗಳು ನಾಲೆಗೆ ನೀರು ಹರಿಸುವ ಚಿಂತನೆ ಮಾಡಿಲ್ಲ. ಕಳೆದೆರಡು ದಿನಗಳ ಹಿಂದೆ ನಾಲೆಯ ಮುಖಾಂತರ ಕೆರೆಕಟ್ಟೆ ತುಂಬಲು ಹರಿಸಲಾಗುತ್ತಿದ್ದ 50 ರಿಂದ 100 ಕ್ಯೂಸೆಕ್ ನೀರು ಕಡಿಮೆಯಾಗುತ್ತಾ ಬರುತ್ತಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯ ಕೊಡಗು ಜಿಲ್ಲೆಯ ಗಡಿಭಾಗ ಶಿರಂಗಾಲದವರೆಗಿನ ರೈತರು ತಮ್ಮ ಗದ್ದೆಗಳಲ್ಲಿ ಬಿತ್ತನೆ ಬೀಜ ಹಾಕಿ ನಾಟಿ ಮಾಡಲು ಕಾಯುತ್ತಿದ್ದಾರೆ. ಆದರೆ, ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಅಧಿಕಾರಿಗಳು ನಾಲೆಗೆ ಅಳವಡಿಸಿರುವ ತೂಬುಗಳನ್ನು ಎತ್ತುವ ಕಾರ್ಯದಲ್ಲೂ ತೊಡಗಿಲ್ಲ. ಇದರಿಂದ ಸೋರುವಿಕೆಯ ನೀರು ಬರುತ್ತಿಲ್ಲ. ನಾಟಿಯ ದಿನಗಳು ಕಳೆಯುತ್ತಿರುವದರಿಂದ ಮುಖ್ಯವಾಗಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಗಡಿಭಾಗದ ರೈತರು ಸೇರಿದಂತೆ ಜಲಾನಯನ ಪ್ರದೇಶದ ರೈತರು ತಾ. 7ರಂದು ಹಾರಂಗಿ ಅಣೆಕಟ್ಟೆಗೆ ಮುತ್ತಿಗೆ ಹಾಕುವದರ ಮೂಲಕ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ.
ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ನೇತೃತ್ವದಲ್ಲಿ ಶಿರಂಗಾಲ, ತೊರೆನೂರು, ಹೆಬ್ಬಾಲೆ ಸುತ್ತಮುತ್ತಲ ಗ್ರಾಮಗಳ ರೈತರುಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.