ಪೊನ್ನಂಪೇಟೆ, ಆ. 4: ಸಾಧಾರಣವಾಗಿ ಕಕ್ಕಡ (ಆಷಾಡ) ಮಾಸದಲ್ಲಿ ಯಾವದೇ ಶುಭ ಕಾರ್ಯ ಗಳು ಕೊಡವ ಸಂಪ್ರದಾಯದಲ್ಲಿ ನಡೆಯುವದಿಲ್ಲ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಸಂಭ್ರಮಾಚರಣೆಗಳೂ ಇರುವದಿಲ್ಲ. ಆದರೆ ಕೆಲವು ವರ್ಷಗಳಿಂದ ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಕಿಗ್ಗಟ್ಟ್‍ನಾಡ್‍ನ ಭಾಗವಾದ ಪೊನ್ನಂಪೇಟೆಯಲ್ಲಿ ಈ ಮಾಸದ ನಡು ಭಾಗದಲ್ಲಿ ನೂರಾರು ಮಂದಿ ಒಂದೆಡೆ ಕಲೆತು ಸಂಭ್ರಮಾಚರಣೆ ಮಾಡುತ್ತಿರುವದು ವಿಶೇಷವಾಗಿ ಆಕರ್ಷಿಸುತ್ತಿದೆ. ಕಕ್ಕಡ ಪದಿನೆಟ್ಟ್‍ನ ವಿಶೇಷತೆ ಇದಕ್ಕೆ ವೇದಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಕಕ್ಕಡ 18ನ್ನು ಸಾರ್ವತ್ರಿಕವಾಗಿ ಆಚರಿಸುತ್ತಿರುವದು ವಿಶೇಷವಾಗಿದೆ.

ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ, ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ತಾ. 3 ರಂದು ಸಂಜೆ ಆರನೇ ವರ್ಷದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಪುರುಷರು, ಮಹಿಳೆಯರು, ಯುವಕರು, ಮಕ್ಕಳು ಜಮಾಯಿಸಿ ಅಲ್ಲಿಂದ ಒಡ್ಡೋಲಗ ಸಹಿತವಾಗಿ ಪಂಜಿನ ಮೆರವಣಿಗೆ ನಡೆಸಿದರು. ಕೊಡವ ಸಮಾಜದಿಂದ ಮುಖ್ಯರಸ್ತೆಯಲ್ಲಿ ಸಾಗಿದ ಮೆರವಣಿಗೆ ಬಸವೇಶ್ವರ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಸ್ ನಿಲ್ದಾಣದ ಮೂಲಕ ಅದೇ ಮಾರ್ಗವಾಗಿ ಹಿಂತಿರುಗಿತು. ಮೆರವಣಿಗೆ ಸಂದರ್ಭ ಉರಿಯುವ ಪಂಜು ಹಿಡಿದು ಹಲವಾರು ಮಂದಿ ಒಡ್ಡೋಲಗಕ್ಕೆ ನೃತ್ಯ ಮಾಡುತ್ತಾ ಸಾಗಿ ಗಮನ ಸೆಳೆದರು.

ಬಳಿಕ ಕೊಡವ ಸಮಾಜದಲ್ಲಿ ಸಭಾಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ಬಿ.ಎ. ನಂಜಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಉಳ್ಳಿಯಡ

(ಮೊದಲ ಪುಟದಿಂದ) ಡಾಟಿ ಪೂವಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರುಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮುಕ್ಕಾಟಿರ ಪುನೀತ್ ಕುಟ್ಟಯ್ಯ, ಪಶು ವೈದ್ಯಕೀಯ ಕ್ಷೇತ್ರದಲ್ಲಿ ಸರ್ಜರಿ ಮತ್ತು ರೇಡಿಯಾಲಜಿಯಲ್ಲಿ ಮೂರು ಚಿನ್ನದ ಪದಕಗಳಿಸಿರುವ ಡಾ. ನೆಲ್ಲೀರ ಅಮೃತ, ವಿದ್ಯುತ್ ಇಲಾಖೆಯ ಬೆಂಗಳೂರು ದಕ್ಷಿಣದ ಉಪ ಮುಖ್ಯ ಪರಿವೀಕ್ಷಕ ತೀತಿರ ಅಪ್ಪಚ್ಚು, ಕೆಎಸ್‍ಆರ್‍ಪಿಯ ನಿವೃತ್ತ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ ಬೆಸ್ಟ್ ಆಲ್ ರೌಂಡ್ ಕಮಾಂಡರ್ ಇನ್ ಇಂಡಿಯಾ ಪ್ರಶಸ್ತಿ ಮುಖ್ಯಮಂತ್ರಿ ಪದಕ ಹಾಗೂ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ವಿಜೇತ ಕೊಟ್ಟಂಗಡ ವಿಜಯ್‍ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಯಂಗಕಲಾವಿದಂಗ ತಂಡದಿಂದ ‘ಕುರ್ಕಂಗ’ ತಮಾಷಿ ನಾಟಕ ಪ್ರದರ್ಶನ ನಡೆಯಿತು. ನೆರೆದಿದ್ದ ಸಾವಿರದ ಐನೂರಕ್ಕೂ ಅಧಿಕ ಮಂದಿ ಮದ್ದ್ ಪಾಯಸದೊಂದಿಗೆ ಸಹಭೋಜನದಲ್ಲಿ ಪಾಲ್ಗೊಂಡಿದ್ದರು. ವಾಲಗತಾಟ್‍ನೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿದ್ದಿತು.

ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಆಲೇಮಾಡ ನವೀನ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಕೋಟೆರ ಕಿಶನ್, ಮುದ್ದಿಯಡ ಮಂಜು ಗಣಪತಿ, ಆಲೇಮಾಡ ಸುದೀರ್, ಚೆಪ್ಪುಡಿರ ಸುನಿಲ್, ಅಜ್ಜಿಕುಟ್ಟಿರ ರಂಜಿ, ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.