ಸೋಮವಾರಪೇಟೆ,ಆ.4: ಇಂಧನ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿರುವದು ರಾಜಕೀಯ ಪ್ರೇರಿತವಾಗಿದ್ದು, ಐ.ಟಿ. ಇಲಾಖೆಯ ಕ್ರಮ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ನಾಯಕರಿದ್ದಾರೆ. ಜೈಲಿಗೆ ಹೋದ ಕೋಟ್ಯಾಧಿಪತಿಗಳಿದ್ದಾರೆ. ಮದುವೆಗೆ 500ಕೋಟಿ ರೂ.ಖರ್ಚು ಮಾಡಿ ಆದಾಯ ತೆರಿಗೆ ಇಲಾಖೆಯನ್ನೇ ಅಣಕಿಸಿದ ನಾಯಕರಿದ್ದರೂ ಅವರ ಮನೆಗಳ ಮೇಲೆ ಧಾಳಿ ಮಾಡುವ ಬದಲು ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿರುವದು ಕೇಂದ್ರ ಸರ್ಕಾರದ ಅಧಿಕಾರದ ದುರುಪಯೋಗ ಎಂದರು.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸಾಂವಿ ಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವದು ಕಾನೂನುಬಾಹಿರ ಕೃತ್ಯ. ಪ್ರಧಾನಿ ನರೇಂದ್ರ ಮೋದಿಯವರ ದ್ವೇಷದ ರಾಜಕಾರಣ ಇದರಿಂದ ತಿಳಿಯುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ಕಾಲದಲ್ಲಿ ಬಿಜೆಪಿ ಸಚಿವರ ವಿರುದ್ಧ ಐಟಿ, ಧಾಳಿಯ ಮೂಲಕ ಯುಪಿಎ ಹಾಗೂ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡಿಲ್ಲ. ದುರುದ್ದೇಶವಿಲ್ಲದ ಆದಾಯ ಇಲಾಖೆಯ ಧಾಳಿಗಳು ಅಗತ್ಯವಿದೆ. ಎಲ್ಲಾ ಪಕ್ಷಗಳ ತೆರಿಗೆ ಕಳ್ಳ ಕೋಟ್ಯಾಧಿಪತಿಗಳ ಮನೆಯ ಮೇಲೆ ಧಾಳಿ ನಡೆಯಲಿ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ.ಲಾರೆನ್ಸ್, ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಪಕ್ಷದ ಮುಖಂಡರಾದ ನಂದಕುಮಾರ್, ಬಿ.ಬಿ.ಸತೀಶ್, ಚೇತನ್, ಎನ್.ಎನ್.ರಮೇಶ್ ಇದ್ದರು.