ಮಡಿಕೇರಿ, ಆ. 3: ಐತಿಹಾಸಿಕ ಹಿನ್ನೆಲೆ ಇರುವ ಮಡಿಕೇರಿ ದಸರಾ ಜನೋತ್ಸವದ ವಿಚಾರ ಸದ್ಯಕ್ಕೆ ಕಾವೇರುತ್ತಿರುವ ವಿಚಾರ. ಒಂದು ಕಡೆಯಿಂದ ಬೈಲಾ ತಿದ್ದುಪಡಿ ವಿಚಾರದಲ್ಲಿ ಗೊಂದಲ ಕಾಣಬರುತ್ತಿದ್ದರೆ, ಮತ್ತೊಂದೆಡೆ ಕಾರ್ಯಾಧ್ಯಕ್ಷರ ನೇಮಕಾತಿ ಸಂಬಂಧ ಕಿತ್ತಾಟ ಕಂಡುಬರುತ್ತಿದೆ.ನೂರಾರು ವರ್ಷಗಳ ಇತಿಹಾಸ ಇರುವ ನಾಡಹಬ್ಬ ದಸರಾವನ್ನು ಈ ಹಿಂದೆ ಹಿರಿಯ, ದೇವಾಲಯ, ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದವರ ತಂಡ ರಚಿಸಿ, ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿ ಆ ಮೂಲಕ ದಸರಾ ಉತ್ಸವವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು.
ಯಾವದೇ ರಾಜಕೀಯ, ಪಕ್ಷಬೇಧ, ಜಾತಿ-ಮತಗಳ ಅಂತರವಿಲ್ಲದೆ ಎಲ್ಲರೂ ಒಗ್ಗೂಡಿ ಶಾಂತಿಯುತವಾಗಿ ಹಬ್ಬ ಆಚರಿಸಲಾಗುತ್ತಿತ್ತು.
ಆನಂತರದಲ್ಲಿ ದಸರಾಗೆ ಬೈಲಾ ರಚನೆಯಾಗಿ ಅದರಲ್ಲಿ ಸಾರ್ವಜನಿಕ ಕ್ಷೇತ್ರದಿಂದ, ದೇವಾಲಯ ಸಮಿತಿಯನ್ನು ಪ್ರತಿನಿಧಿಸುವವರನ್ನು ಕಾರ್ಯಾಧ್ಯಕ್ಷರಾಗಿ ನೇಮಕಾತಿ ಮಾಡಬೇಕೆಂದು ನಿಯಮ ಅಳವಡಿಸಿ ಬಳಿಕ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಗಳು ಆರಂಭವಾಗ ತೊಡಗಿದವು.
ಆದರೆ ಇತ್ತೀಚಿನ ಮಾರ್ಗಗಳಲ್ಲಿ ದಶಮಂಟಪ ಸಮಿತಿಯವರೇ ಆಯ್ಕೆ ಮಾಡುವ ಅಭ್ಯರ್ಥಿಯ ವಿರುದ್ಧ ಯಾರೂ ಸ್ಪರ್ಧಿಸದಿದ್ದುದರಿಂದ ಆ ವ್ಯಕ್ತಿಯೇ ಆಯ್ಕೆಯಾಗುತ್ತಿದ್ದರು. ಆದರೆ ಇತ್ತೀಚಿನ
(ಮೊದಲ ಪುಟದಿಂದ) ಬೆಳವಣಿಗೆ ತೀರಾ ವಿಚಿತ್ರವಾಗಿದೆ. ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ವಿಚಾರವನ್ನೂ ಕೂಡ ರಾಜಕೀಯ ಪಕ್ಷಗಳು ತೀರ್ಮಾನಿಸುವ ಪರಿಪಾಟ ಬಂದೊದಗಿದೆ.
ಈ ಬೆಳವಣಿಗೆಯಿಂದಾಗಿ ಸಂಪ್ರದಾಯಸ್ತರು, ಹಿತೈಷಿಗಳು, ಆಸಕ್ತಿ ಇರುವವರು ದಸರಾದಿಂದ ದೂರ ಉಳಿಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾಜಕೀಯ ಪಕ್ಷಗಳ ಪ್ರಮುಖರು ಸೇರಿ ಒಪ್ಪಂದದಂತೆ ಅಧಿಕಾರ ಹಂಚಿಕೊಂಡು ಸಮಿತಿ ರಚನೆ ಮಾಡುವ ಬೆಳವಣಿಗೆ ಕಂಡುಬರುತ್ತಿದೆ.
ಆದರೆ, ಈ ಬಾರಿ ಬೈಲಾ ತಿದ್ದುಪಡಿಯೊಂದಿಗೆ ಕಾರ್ಯಾಧ್ಯಕ್ಷ ಸ್ಥಾನ ಸಾರ್ವಜನಿಕ ಕ್ಷೇತ್ರಕ್ಕೆ ಮೀಸಲಿಡುವಂತೆ ತೀರ್ಮಾನ ಕೈಗೊಂಡ ಸಂದರ್ಭ ಇದಕ್ಕೆ ದೇವಾಲಯ ಸಮಿತಿಯಿಂದ ತೀರಾ ವಿರೋಧ ವ್ಯಕ್ತಗೊಂಡು ತಿದ್ದುಪಡಿಯಾದ ಬೈಲಾಗೆ ಇನ್ನೂ ಕೂಡ ಅಂಗೀಕಾರ ಆಗಿಲ್ಲ.
ಈ ನಡುವೆ ಸದ್ಯದಲ್ಲೇ ಕಾರ್ಯಾಧ್ಯಕ್ಷರ ನೇಮಕಾತಿ ಮಾಡಿ ಶಾಂತಿಯುತ ದಸರಾ ಆಚರಣೆ ಮಾಡುವದಾಗಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿಕೊಂಡಿದ್ದಾರೆ. ಇದಕ್ಕೂ ಕೂಡ ವಿರೋಧ ವ್ಯಕ್ತಗೊಳ್ಳುತ್ತಿದೆ.
ಇನ್ನೂ ಒಂದು ಹಜ್ಜೆ ಮುಂದಿಟ್ಟಿರುವ ದಶಮಂಟಪ ಸಮಿತಿಯವರು ಮೊನ್ನೆ ದಿನ ಸಭೆ ನಡೆಸಿ ಕಾರ್ಯಾಧ್ಯಕ್ಷರ ಆಯ್ಕೆ ಸಂಬಂಧ ಸಭೆ ಕೂಡ ನಡೆಸಿದ್ದಾರೆ. ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದು, ಗೊಂದಲದ ಗೂಡಾಗಿ ಮತ್ತೆ ಮುಂದೂಡಲ್ಪಟ್ಟಿದೆ.
ಬಾಲಭವನದಲ್ಲಿ ನಡೆದ ಸಭೆಯಲ್ಲಿ ಹತ್ತು ದೇವಾಲಯಗಳು ಹಾಗೂ ನಾಲ್ಕು ಶಕ್ತಿ ಕರಗ ದೇವತೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಕೆ.ಎಸ್. ರಮೇಶ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಪ್ರಸ್ತಾಪಗೊಂಡಿದೆ. ಈ ಸಂದರ್ಭ ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿಯವರು ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭಾ ಸದಸ್ಯರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬಾರದೆಂದು ತಕರಾರು ತೆಗೆದಿದ್ದಾರೆ. ಆದರೆ ರಮೇಶ್ ಕೂಡ ದೇವಾಲಯ ಸಮಿತಿಯಿಂದ ಪ್ರತಿನಿಧಿಸುತ್ತಿದ್ದು, ಅವರನ್ನೇ ನೇಮಕ ಮಾಡುವಂತೆ ರಮೇಶ್ ಬೆಂಬಲಿಗರು ತಿರುಗಿ ಬಿದ್ದಿದ್ದಾರೆ. ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಮತದಾನದ ಮೂಲಕ ಆಯ್ಕೆ ಮಾಡುವಂತೆ ಸಲಹೆ ಕೇಳಿ ಬಂದ ಸಂದರ್ಭ ಇದಕ್ಕೂ ವಿರೋಧ ವ್ಯಕ್ತಗೊಂಡಿದೆ. ನಗರಸಭಾ ಸದಸ್ಯರನ್ನು ಆಯ್ಕೆ ಮಾಡುವದಾದರೆ ನಾವುಗಳೂ ಕೂಡ ಆಕಾಂಕ್ಷಿಗಳೆಂದು ಕೋಟೆಮಾರಿಯಮ್ಮ ದೇವಾಲಯದಿಂದ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ನಂದೀಶ್, ಕೋಟೆ ಗಣಪತಿ ದೇವಾಲಯದಿಂದ ಬಿ.ಎಂ. ರಾಜೇಶ್, ಕರವಲೆ ಭಗವತಿ ದೇವಾಲಯದ ಡೀನ್ ಬೋಪಣ್ಣ, ದೇಚೂರು ರಾಮಮಂದಿರದಿಂದ ಬಿ.ಎಸ್. ಪ್ರಶಾಂತ್ ಅವರುಗಳು ಎದ್ದು ನಿಂತಿದ್ದಾರೆ.
ಮತ್ತೆ ಗೊಂದಲ ಉಂಟಾಗಿ ಕೆಲವರು ಈ ಹಿಂದಿನ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರೇ ಮುಂದುವರಿಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಕೊನೆವರೆಗೂ ಯಾವದೇ ಒಮ್ಮತದ ಅಭಿಪ್ರಾಯ ಮೂಡದ್ದರಿಂದ ಮತ್ತೆ ಸಭೆ ನಡೆಸಿ, ತೀರ್ಮಾನಿಸುವ ಬಗ್ಗೆ ನಿರ್ಧಾರ ತಳೆಯಲಾಯಿತು. ರಮೇಶ್ ಆಯ್ಕೆಗೆ ಸ್ವಪಕ್ಷದವರೇ ಆದ ಬಿ.ಎಂ. ರಾಜೇಶ್, ಡೀನ್ ಬೋಪಣ್ಣ, ಪ್ರಶಾಂತ್ ಸೇರಿದಂತೆ ಇತರರು ವಿರೋಧ ವ್ಯಕ್ತಪಡಿಸಿರುವದು ಮತ್ತೊಂದು ಬೆಳವಣಿಗೆ.
ಈ ನಡುವೆ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಮೂಲಕ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪತ್ರಕರ್ತ ಅನಿಲ್ ಎಚ್.ಟಿ. ಅವರ ಹೆಸರು ಸಭೆಯಲ್ಲಿ ಪ್ರಸ್ತಾಪಗೊಂಡಿದೆ.
ನಾಡಹಬ್ಬವನ್ನು ದೇವರ ಕೈಂಕರ್ಯವೆಂದು ಸಮಚಿತ್ತದಿಂದ ಎಲ್ಲರೂ ಒಗ್ಗೂಡಿ ಆಚರಿಸುವ ಬದಲಿಗೆ ಈ ರೀತಿಯ ಕಚ್ಚಾಟದಿಂದ ಸಾರ್ವಜನಿಕರಲ್ಲಿ ದಸರಾದ ಬಗ್ಗೆಯೇ ಜಿಗುಪ್ಸೆ ಮೂಡಿದೆ ಎಂದರೆ ತಪ್ಪಾಗಲಾರದು.
-ಸಂತೋಷ್