ಮಡಿಕೇರಿ, ಆ. 4: ರಾಜ್ಯ ಸರಕಾರದಿಂದ ಹಸಿವು ಮುಕ್ತ ಕರ್ನಾಟಕ ಯೋಜನೆಯಡಿ ‘ಅನ್ನಭಾಗ್ಯ’ ಹೆಸರಿನಲ್ಲಿ ನೀಡಲಾಗುವ ಪಡಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟಗೊಳಿಸಿದರೆ ಕಾನೂನು ಕ್ರಮ ಜರುಗಿಸಬೇಕೆಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ತಾಕೀತು ಮಾಡಿದ್ದಾರೆ.ಇಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಪುಟ್ಟಸ್ವಾಮಿ ಅವರೊಂದಿಗೆ ಈ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆ ಚರ್ಚಿಸಿದ ಅವರು, ಸರಕಾರ ನಿಗದಿಗೊಳಿಸಿರುವ ಮೌಲ್ಯಕ್ಕೆ ತಕ್ಕಂತೆ ಫಲಾನುಭವಿಗಳಿಗೆ ಅಕ್ಕಿ, ಬೇಳೆ, ಸೀಮೆಎಣ್ಣೆ ಪೂರೈಸುವಂತೆ ಸೂಚಿಸಿದರು.
ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ, ಪಡಿತರ ಚೀಟಿದಾರರಿಗೆ ತಲಾ 7 ಕೆ.ಜಿ. ಅಕ್ಕಿ ಪೂರೈಕೆ ಆಗುತ್ತಿಲ್ಲವೆಂದೂ ಸೀಮೆಎಣ್ಣೆ ಪ್ರತಿ ಲೀಟರ್ಗೆ ರೂ. 28ರಿಂದ 30 ವಸೂಲಿ ಮಾಡುತ್ತಿದ್ದಾರೆ ಹಾಗೂ ಬೇಳೆಗೆ ರೂ. 50 ಪಡೆಯುತ್ತಿರುವದಾಗಿ ತನ್ನ ಬಳಿ ಜನರು ದೂರು ನೀಡಿದ್ದಾಗಿ ಶಶಿ ಸುಬ್ರಮಣಿ ಇಲಾಖಾಧಿಕಾರಿಯ ಗಮನ ಸೆಳೆದರು. ಈ ಬಗ್ಗೆ ಖುದ್ದು ಪರಿಶೀಲನೆಯ ಭರವಸೆ ನೀಡಿದ ಅಧಿಕಾರಿ ಪುಟ್ಟಸ್ವಾಮಿ, ಬಿಪಿಎಲ್ ಕಾರ್ಡ್ದಾರರಿಗೆ ತಲಾ 7 ಕೆ.ಜಿ.ಯಂತೆ ಅಕ್ಕಿ, ಪ್ರತಿ ಕೆ.ಜಿ. ಬೇಳೆಗೆ ರೂ. 38 ಹಾಗೂ ಸೀಮೆಎಣ್ಣೆಗೆ ರೂ. 25 ಮಾತ್ರ ಸಂಗ್ರಹಿಸಲು ಆಯಾ ಪಡಿತರ ವಿತರಕರಿಗೆ ಕಟ್ಟಪ್ಪಣೆ ಮಾಡಿರುವದಾಗಿ ತಿಳಿಸಿದರು.
ನಿಯಮ ಉಲ್ಲಂಘಿಸಿ ಅಧಿಕ ಹಣ ವಸೂಲಿ ಮಾಡಿದರೆ, ಆ ಬಗ್ಗೆ ಫಲಾನುಭವಿಗಳು ದೂರು ಸಲ್ಲಿಸುವಂತೆ ಸಲಹೆ ನೀಡಿದ ಅವರು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ವೈದ್ಯರ ವ್ಯವಸ್ಥೆ : ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣದಿಂದ ವಾರಕ್ಕೆ 3 ದಿನ ಆಯುರ್ವೇದ ವೈದ್ಯರೊಬ್ಬರನ್ನು ನೇಮಿಸುವಂತೆ ಶಶಿ ಸುಬ್ರಮಣಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದು, ತಕ್ಷಣದಿಂದ ವ್ಯವಸ್ಥೆ ರೂಪಿಸುವದಾಗಿ ಅಧಿಕಾರಿ ಭರವಸೆ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯದೊಂದಿಗೆ ಔಷಧಿ ಕೊರತೆಯಾಗದಂತೆ ಗಮನಿಸುವದು, ದಾದಿಯೊಬ್ಬರನ್ನು ನಿಯೋಜಿಸಲಾಗುವದು ಎಂದು ತಿಳಿಸಿದರಲ್ಲದೆ, ಮುಂದೆ ಜನತೆಗೆ ತೊಂದರೆಯಾಗದಂತೆ ಇಲಾಖೆ ಯಿಂದ ಗಮನ ಹರಿಸಲಾಗುವದು ಎಂಬ ಭರವಸೆ ಲಭಿಸಿದೆ.