ವೀರಾಜಪೇಟೆ, ಆ. 4: ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಕಕ್ಕಡ ತಿಂಗಳು (ಆಟಿ ಮಾಸ) ಎಂದರೆ ಕೃಷಿ ಚಟುವಟಿಕೆಯ ಹಾಗೂ ವರ್ಷಧಾರೆಯ ಕಾಲ. ಈಗ ಕೆಲವು ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯನ್ನು ಕೈ ಬಿಡಲಾಗುತ್ತಿದೆ. ಆದರೂ ಆಗ ಆಚರಣೆಗೆ ಬಂದ ಈ ಕಕ್ಕಡ- 18 ರಂತಹ ವಿಶಿಷ್ಠ ಆಚರಣೆಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹೇಳಿದರು.

ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಕ್ಕಡ 18 ರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಕಕ್ಕಡ ತಿಂಗಳನ್ನು ವಿಶಿಷ್ಟವಾಗಿ ಪರಿಗಣಿಸಲಾಗಿತ್ತು. ದೈನಂದಿನ ಇತರ ಚಟುವಟಿಕೆಗಳನ್ನು ಬದಿಗಿಟ್ಟು ಕೃಷಿ ಕೆಲಸಕ್ಕೆ ಒತ್ತು ನೀಡಲಾಗುತ್ತಿತ್ತು . ಆಗಿನ ಬಿರು ಮಳೆ ಕಾರಣ ಬರುವ ರೋಗ ರುಜಿನಗಳನ್ನು ತಡೆಯಲು ಈ ರೀತಿ ಮದ್ದು ಸೊಪ್ಪಿನಿಂದ ಮಾಡಿದ ಪಾಯಸ ಇತರ ಬಗೆಯ ಆಹಾರಗಳ ಸೇವನೆ ರೂಢಿಸಿಕೊಂಡರು. ಅದು ಇಂದಿಗೂ ಮುಂದುವರಿದುಕೊಂಡು ಬಂದಿದ್ದು, ಉಳಿಸಿಕೊಂಡು ಹೋಗಬೇಕು ಎಂದು ರಾಣು ಅಪ್ಪಣ್ಣ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಗದ್ದೆ ನಾಟಿ ಕಾಲದಲ್ಲಿ ಜನಪದ ಹಾಡುಗಳಿಗೆ ಒತ್ತು ನೀಡಲಾಗಿತ್ತು, ನಾಟಿ ಆರಂಭದಲ್ಲಿ ವಯ್ಯ ಪಾಟ್ ಹಾಡಲಾಗುತ್ತಿತ್ತು. ನಾಟಿ ಮುಕ್ತಾಯ ಹಂತಕ್ಕೆ ಬಂದಾಗ ಕಳಿಪಾಟ್ ಹಾಡುತ್ತಿದ್ದರು. ಕೊಡಗಿನಲ್ಲಿ ಹಿಂದಿನ ಕಾಲದಲ್ಲಿ ಭತ್ತದ ನಾಟಿ ಕೆಲಸದ ಸಮಯದಲ್ಲಿ ಕಕ್ಕಡದ ಆಚರಣೆ ಬಲು ಜೋರು ಮತ್ತು ವಿಶೇಷತೆ ಇತ್ತು ಎಂದರು.

ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಡವ ಮಹಿಳೆಯರಿಗೆ ಹಿಂದಿನ ಕಾಲದಿಂದಲೂ ವಿಶೇಷóವಾದ ಸ್ಥಾನ ಮಾನವಿದೆ. ಐತಿಹಾಸಿಕ ದಾಖಲೆಯ ಪ್ರಕಾರ ಅವರು ದೇವ ಕನ್ನಿಕೆಯರು ಆಗಿದ್ದರು ಎನ್ನಲಾಗಿದ್ದು ಇಂದಿಗೂ ವಿವಾಹ ಪದ್ದತಿಯಲ್ಲಿ ವಿಶಿಷ್ಠ ಆಚರಣೆಯನ್ನು ಕಾಣಬಹುದು. ನಮ್ಮ ಪ್ರತಿಯೊಂದು ಆಚಾರ, ವಿಚಾರ, ಸಂಸ್ಕøತಿಗಳಿಗೆ ಅದರದ್ದೇ ಆದ ಅರ್ಥವಿದೆ ಎಂದರು.

ಕಕ್ಕಡ 18 ಸಮಾರಂಭವನ್ನು ಅಖಿಲಕೊಡವ ಸಮಾಜದ ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಉದ್ಘಾಟಿಸಿದರು. ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ, ಶರ್ಮಿಳ, ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ , ಕೆಚ್ಚೇಟಿರ ಕಾಮುಣಿ ಮುಂತಾದವರು ಉಪಸ್ಥಿತರಿದ್ದರು.