ಶ್ರೀಮಂಗಲ, ಆ. 4: ಕುಟ್ಟ ಗ್ರಾ.ಪಂ. ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೇಖೆಯ ಅರ್ಹ ಫಲಾನುಭವಿಗಳಿಗೆ ಪ್ರಸಕ್ತ ಸಾಲಿನಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಮುಂದಿನ ಸಾಲಿನಲ್ಲಿ ಸಾಮಾನ್ಯ ವರ್ಗದ ಅರ್ಹ ಫಲಾನುಭವಿಗಳಿಗೂ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಗ್ರಾ.ಪಂ.ನಿಂದ ಕ್ರಿಯಾಯೋಜನೆ ತಯಾರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರು ಸಲಹೆ ನೀಡಿದರು.

ಕುಟ್ಟ ಗ್ರಾ.ಪಂ. ವತಿಯಿಂದ ಇಲ್ಲಿನ ಸಮುದಾಯ ಭವನದಲ್ಲಿ ಗ್ರಾ.ಪಂ.ನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇಕಡ 25 ಮೀಸಲು ಅನುದಾನದಲ್ಲಿ 51 ಅರ್ಹ ಫಲಾನುಭವಿಗಳಿಗೆ ರೂ. 2.50 ಲಕ್ಷ ಅನುದಾನದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾ ಪ್ರಭು ಮಾತನಾಡಿ, ಪ.ಪಂ, ಪ.ಜಾ.ಯಲ್ಲಿ ಮಾತ್ರ ಬಡತನದಲ್ಲಿ ಜನ ಇಲ್ಲ. ಸಾಮಾನ್ಯ ವರ್ಗದಲ್ಲಿಯೂ ಬಡತನದಲ್ಲಿರುವ ಅರ್ಹ ಫಲಾನುಭವಿಗಳಿಗೆ ಉಚಿತ ಅನಿಲ ಸೌಲಭ್ಯ ನೀಡುವಂತೆ ಗ್ರಾ.ಪಂ.ಗೆ ಬೇಡಿಕೆ ಬಂದಿರುವದರಿಂದ 2017-18ರ ಸಾಲಿನಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿ ಸಾಮಾನ್ಯ ವರ್ಗದ ಜನರಿಗೆ ಈ ಸೌಲಭ್ಯ ನೀಡಲು ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.

ತಾಲೂಕು ಅಕ್ರಮ- ಸಕ್ರಮ ಸಮಿತಿ ಸದಸ್ಯ ಹೆಚ್.ವೈ ರಾಮಕೃಷ್ಣ ಮಾತನಾಡಿ, ಬಡ ವರ್ಗದವರು ಎಲ್ಲಾ ಜನರಂತೆ ಮೂಲಭೂತ ಸೌಲಭ್ಯದೊಂದಿಗೆ ಜೀವನ ನಡೆಸಬೇಕು ಎಂದರು. ಸಭೆಯಲ್ಲಿ ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್ ಉತ್ತಪ್ಪ, ಸದಸ್ಯರಾದ ಪಿ.ಕೆ. ಅರುಣ್ ಕುಮಾರ್. ಬಿ.ಕೆ. ಮಾರಾ, ಮೈಮುನ್ನೀಸಾ, ಕೆ.ಬಿ. ರಂಜಿತ್ ಕುಮಾರ್, ತೀತಿರ ರುಕ್ಮಿನಿ, ಆಶಾ, ವಿಜಯ, ಕಾಳಿ, ಯೋಗರಾಣಿ, ರೋಶ್ಲಿ, ಸುನಿತಾ, ಪಿ.ಜಿ. ಅಯ್ಯಪ್ಪ, ಸುಲೈಮಾನ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗೋಪಾಲಕೃಷ್ಣ, ವೇಲಯುಧನ್, ಪಲಣಿ, ಮೊಹಿದ್ದೀನ್ ಮತ್ತಿತರರು ಹಾಜರಿದ್ದರು.