ಸೋಮವಾರಪೇಟೆ, ಆ. 4: ಪ್ರತಿಯೋರ್ವ ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಟ 6 ತಿಂಗಳಿಂದ ಹಿಡಿದು ಗರಿಷ್ಠ 2 ವರ್ಷಗಳವರೆಗೆ ಎದೆ ಹಾಲು ನೀಡಿದ್ದಲ್ಲಿ, ತಾಯಂದಿರು ಸ್ತನ ಕ್ಯಾನ್ಸರ್‍ನಿಂದ ಹಿಡಿದು ಇತರ ಮಾರಕ ಕಾಯಿಲೆಗಳಿಂದ ದೂರ ಇರಬಹುದು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಕಿವಿಮಾತು ಹೇಳಿದರು. ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ವಳಗುಂದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಯಿಯ ಎದೆಹಾಲು ಪಡೆಯುವದು ಮಕ್ಕಳ ಜನ್ಮಸಿದ್ಧ ಹಕ್ಕಾಗಿದೆ. ತಾಯಂದಿರು ಎದೆ ಹಾಲು ನೀಡುವಲ್ಲಿ ಮಕ್ಕಳಿಗೆ ದ್ರೋಹ ಎಸಗಿದರೆ, ತಾಯಿಗೆ ಮುಂದೆ ಅನಾರೋಗ್ಯದಂತ ಶಾಪ ತಟ್ಟಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಳಿಮಳ್ತೆ ದಿವಾಕರ್, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಾಣಂತಿಯರು ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುವದನ್ನು ಸಂಸ್ಕøತಿಯಾಗಿಸಿಕೊಂಡಿದ್ದರೆ, ನಗರ ಪ್ರದೇಶಗಳ ಮಹಿಳೆಯರು ಎದೆಹಾಲು ಉಣಿಸದಿರುವದನ್ನು ಫ್ಯಾಷನ್ ಎಂಬಂತೆ ತಿಳಿದುಕೊಂಡಿದ್ದಾರೆ. ಈ ಮನೋಭಾವ ಬದಲಾಗಬೇಕಿದೆ ಎಂದರು.

ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಇಂದೂಧರ್ ಪ್ರಾಸ್ತವಿಕವಾಗಿ ಮಾತನಾಡಿ, ಸರಕಾರ ವಿಶ್ವ ಸ್ತನ್ಯ ಪಾನ ಸಪ್ತಾಹವನ್ನು ಆಚರಿಸುತ್ತಾ, ಆ ಮೂಲಕ ಸುಸ್ಥಿರ ಎದೆ ಹಾಲು ಕುಡಿಸುವದಕ್ಕಾಗಿ ಒಗ್ಗೂಡೋಣ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಸಹಭಾಗಿತ್ವವನ್ನು ಪಡೆದು, ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದ ಜನರಿಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು. ಕಿರಿಯ ಆರೋಗ್ಯ ಸಹಾಯಕಿ ಕೆ.ಪಿ. ಪಾರ್ವತಿಯವರು ಮಗುವಿಗೆ ಹಾಲುಣಿಸುವ ಅವಧಿ, ವಿಧಾನ ಹಾಗೂ ಸ್ವಚ್ಛತೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದರು. ವೇದಿಕೆಯಲ್ಲಿ ದೊಡ್ಡಮಳ್ತೆ ಗ್ರಾಪಂ ಸದಸ್ಯೆ ಸೋಮಕ್ಕ, ಆಶಾ ಕಾರ್ಯಕರ್ತೆ ಈಶ್ವರಿ, ಫಲಿತ, ಗೌಡಳ್ಳಿ ಆರೋಗ್ಯ ಕೇಂದ್ರದ ನವೀನ್ ನಿಶ್ಚಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಳಗುಂದ ಗ್ರಾಮಸ್ಥರು ಹಾಗೂ ಗಿರಿಜನ ಹಾಡಿಯ ಮಹಿಳೆಯರು ಪಾಲ್ಗೊಂಡಿದ್ದರು.