ಪೊನ್ನಂಪೇಟೆ, ಆ. 4: ಸ್ವಾತಂತ್ರ್ಯ ಲಭಿಸಿ 70 ವರ್ಷವಾದರೂ ಕೊಡವ ಜನಾಂಗದವರು ಹೆಚ್ಚಾಗಿರುವ ವೀರಾಜಪೇಟೆ ತಾಲೂಕಿನಲ್ಲಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗದೆ ಅನ್ಯಾಯವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕೊಡವ ಅಭ್ಯರ್ಥಿಗೆ ಅವಕಾಶ ಸಿಗುವಂತಾಗಬೇಕು. ಜಿಲ್ಲೆಯ ಜನಾಂಗವೊಂದು ಕೊಡವ ಜನಾಂಗದ ಬಗ್ಗೆ ವಿರೋಧಿ ಧೋರಣೆ ಇಟ್ಟುಕೊಂಡು ಪಿತೂರಿ ನಡೆಸುತ್ತಿರುವ ಬಗ್ಗೆ ಜಾಗೃತಿ ವಹಿಸಿ ಇದನ್ನು ಎದುರಿಸುವ ಅನಿವಾರ್ಯತೆ ಬಂದಿರುವದಾಗಿ ನಿನ್ನೆ ಸಂಜೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಕ್ಕಡ-18 ಸಭಾ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಗೊಂಡಿತು. ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಮುಖರು ಈ ವೇದಿಕೆಯಲ್ಲಿ ಈ ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಮೇಜರ್ ಬಿದ್ದಂಡ ಎ. ನಂಜಪ್ಪ ಅವರು ಕೊಡವ ಜನಾಂಗದವರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಈತನಕ ಜನಾಂಗದವರು ಯಾರೂ ಶಾಸಕರಾಗದಿರುವದು ವಿಪರ್ಯಾಸ ಎಂದರು. ಕೊಡವರ ಸೇನಾ ಪರಂಪರೆ, ವೀರತ್ವದ ಕುರಿತು ಹಲವು ಅಂಶಗಳನ್ನು ಪ್ರಸ್ತಾಪಿಸಿದ ಅವರು ಗದ್ದೆಯನ್ನು ಪಾಳುಬಿಡದೆ ಕೃಷಿ ಮಾಡಬೇಕೆಂದು ಕರೆ ನೀಡಿದರು.

ಮತ್ತೋರ್ವ ಅತಿಥಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಾತನಾಡಿ, ಕೊಡಗು ಆಡಳಿತದಲ್ಲಿ ಸರಕಾರದ ಅಧೀನದಲ್ಲಿರಬಹುದು. ಆದರೆ ಜನಾಂಗದವರು ಕೊಡವತನವನ್ನು ಬಿಡಬಾರದು ಎಂದರಲ್ಲದೆ ಈ ಕ್ಷೇತ್ರದಲ್ಲಿ ಕೊಡವರಿಗೇ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಪ್ರಸ್ತಾಪಿಸಿದರು. ಕೊಡವ ಸಂಸ್ಕøತಿಗೆ ಧಕ್ಕೆಯಾಗುತ್ತಿರುವ ಕುರಿತು ವಿಷಾದಿಸಿದ ಅವರು ಜನಾಂಗದವರು ಈ ಬಗ್ಗೆ ಜವಾಬ್ದಾರಿ ಅರಿಯಬೇಕೆಂದು ಕರೆ ನೀಡಿದರು.

ಈ ನಡುವೆ ಸಭಿಕರೊಬ್ಬರು ಈ ವೇದಿಕೆಯಲ್ಲಿ ರಾಜಕೀಯದ ಮಾತು ಬೇಡ ಎಂದ ಪ್ರಸಂಗವೂ ನಡೆಯಿತು. ಬಳಿಕ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರು, ರಾಜಕೀಯ ವಿಚಾರ ಇದಲ್ಲವಾದರೂ, ಜನಾಂಗದ ಭವಿಷ್ಯದ ದೃಷ್ಟಿಯಿಂದ ಕೆಲವು ವಿಚಾರಗಳ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದರು.

ಜಿಲ್ಲೆಯ ಮತ್ತೊಂದು ಜನಾಂಗ ಕೊಡವರ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಕಾವೇರಿ ನಮ್ಮ ಕುಲದೇವರು ಈ ಸಮಿತಿ ರಚನೆಗೆ ಮುಂದಾಗಿದ್ದ ಸಂದರ್ಭ ಈ ಬಗ್ಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಟಿಪ್ಪುವಿನಿಂದ ಕೊಡವ ಜನಾಂಗದವರಿಗೆ ಅನ್ಯಾಯವಾಗಿರುವದು ಸತ್ಯವಾದರೂ ದೇವಟಿ ಪರಂಬು ವಿಚಾರದಲ್ಲಿ ಈ ಜಾಗ ಕಬಳಿಸುವ ಹುನ್ನಾರ ಎಂಬಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೋವಿ ಹಕ್ಕು ಪರಂಪರಗತವಾಗಿ ಬಂದಿದೆ. ಆದರೆ ಕೊಡವರಿಗೇಕೆ ಇದು ಎಂಬಂತೆ ಪ್ರಶ್ನೆ ಮಾಡಲಾಗುತ್ತಿದೆ. ಬೇರೆಯವರು ಯಾವದೇ ಬೇಡಿಕೆ ಇಟ್ಟು ಪಡೆದುಕೊಳ್ಳಲಿ ಆದರೆ ನಮ್ಮ ಸೌಲಭ್ಯವನ್ನು ಪ್ರಶ್ನಿಸುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಿತರಕ್ಷಣಾ ಬಳಗದ ಅಧ್ಯಕ್ಷ ಸನ್ನಿ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಸ್ವಾಗತಿಸಿದರು. ಕಾಳಿಮಾಡ ಎಂ. ಮೋಟಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.