ಗೋಣಿಕೊಪ್ಪಲು,ಆ.4: ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಇಂದು ಗೋಣಿಕೊಪ್ಪಲಿನ ವಿವಿಧೆಡೆ ಮನೆ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನ ಜರುಗಿತು.ಗೋಣಿಕೊಪ್ಪಲಿನ ಶತಮಾನಗಳ ಇತಿಹಾಸವಿರುವ ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ಸುಮಾರು 600ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದು, ಮಧ್ಯಾಹ್ನ ಸಾಮೂಹಿಕ ಭೋಜನವನ್ನು ಏರ್ಪಡಿಸಲಾಗಿತ್ತು. ದೇವಸ್ಥಾನ ಮುಖ್ಯಸ್ಥರಾದ ರಾಣಿ ಸುರೇಂದ್ರ ಅವರ ಉಸ್ತುವಾರಿಯಲ್ಲಿ ಗ್ರಾ.ಪಂ.ಸದಸ್ಯ ಪಿ.ಜಿ.ರಾಜಶೇಖರ್, ವಿ.ವಿ.ಅರುಣ್‍ಕುಮಾರ್, ಎಂ.ಎನ್.ಗಣೇಶ್ ಮುಂತಾದವರು ವರಮಹಾಲಕ್ಷ್ಮಿ ಹಬ್ಬದ ಕಾರ್ಯಕ್ರಮ ನಡೆಸಿಕೊಟ್ಟರು.

ಅರುವತ್ತೊಕ್ಕಲುವಿನಲ್ಲಿ ಆಚರಣೆ

ಗೋಣಿಕೊಪ್ಪಲು ಸಮೀಪ ಅರುವತ್ತೊಕ್ಕಲುವಿನ ವಿ.ವಿ.ಶುಭಾ ವೆಂಕಟೇಶ್ ಅವರು 15ನೇ ವರ್ಷದ ವರ ಮಹಾಲಕ್ಷ್ಮಿ ಪೂಜೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಿದರು. ಬೆಳ್ಳಿಯ ವರಮಹಾಲಕ್ಷಿ ವಿಗ್ರಹಕ್ಕೆ ಅಲಂಕಾರ ಇತ್ಯಾದಿ ತಾ.3 ರ ರಾತ್ರಿಯಿಂದಲೇ ಪೂಜಾ ವಿಧಿವಿಧಾನ ಆರಂಭಿಸಿದ್ದು,ನೂರಾರು ಜನ ಗ್ರಾಮಸ್ಥರು ಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನೆರೆಹೊರೆ ಅಲ್ಪಸಂಖ್ಯಾತವರ್ಗದ ಮಹಿಳೆಯರೂ ಬಂದು ಪ್ರಸಾದ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು.

ಮೂಲತಃ ಮೈಸೂರಿನವರಾದ ಶುಭಾ ಅವರು ವಿವಾಹ ನಂತರ ಗೋಣಿಕೊಪ್ಪಲಿನಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಮುಂದುವರಿಸಿದ್ದು, ಈ ಬಾರಿ ಅಧಿಕ ಯುವತಿಯರು, ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿರುವದಾಗಿ ತಿಳಿಸಿದ್ದಾರೆ. ಮಧ್ಯಾಹ್ನ ಸಾಮೂಹಿಕ ಭೋಜನವನ್ನು ತಾವೇ ಸಹಪಾಠಿಗಳೊಂದಿಗೆ ತಯಾರಿಸಿ ಉಣಬಡಿಸಲು ಬೆಳಗ್ಗಿನ ಜಾವ 4 ಗಂಟೆಯಿಂದಲೇ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡು ದೇವಿಗೆ ಮೂರು ತರದ ನೈವೇದ್ಯ, ಹೋಳಿಗೆ, ಹುಳಿಯನ್ನ, ಅಕ್ಕಿ ಪಾಯಸ, ತಿಂಡಿ-ಹಣ್ಣುಗಳು, ತಾವರೆ ಹೂವಿನ ಸಿಂಗಾರ ಇತ್ಯಾದಿ ವಿಶೇಷತೆಗಳೊಂದಿಗೆ 9 ಮಂದಿ ಮಹಿಳೆಯರಿಗೆ ಕಂಕಣ ಕಟ್ಟಿ ಆಶೀರ್ವಾದ ಪಡೆದುಕೊಂಡಿರುವದಾಗಿ ಶುಭಾ ವೆಂಕಟೇಶ್ ನುಡಿದರು.

ವರ್ಷಂಪ್ರತಿ ವರಮಹಾಲಕ್ಷ್ಮಿ ಪೂಜೆ ಮಾಡುವದರಿಂದ ಸಾರ್ವಜನಿಕವಾಗಿ ಆಚರಣೆ ಮಾಡುವದರಿಂದ ಶಾಂತಿ ಸಮಾಧಾನ ಸಿಕ್ಕಿದೆ. ಆಮಂತ್ರಣ ಇಲ್ಲದವರೂ ಉತ್ಸಾಹದಿಂದ ಪೂಜೆಗೆ ಬರುತ್ತಿರುವದೂ ಅತೀವ ಆನಂದವಾಗಿದೆ. ಸಂಜೆಯೂ ಮುತ್ತೈದೆಯರು ಪೂಜೆಗೆ ಆಗಮಿಸಲಿದ್ದು ಹರಶಿನ ಕುಂಕುಮ, ಬಳೆ, ವಸ್ತ್ರ ಇತ್ಯಾದಿ ಪ್ರಸಾದದೊಂದಿಗೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಕುಟುಂಬದಲ್ಲಿ ನೆಮ್ಮದಿ ಮೂಡಲು ಇಂತಹ ಪೂಜೆಯೂ ಅಗತ್ಯ ಎಂದು ನುಡಿದರು.ಗೋಣಿಕೊಪ್ಪಲಿನ ಚಿನ್ನಾಭರಣ ವ್ಯಾಪಾರಸ್ಥರ ಮನೆಯಲ್ಲಿಯೂ ಸಂಭ್ರಮದ ವರ ಮಹಾಲಕ್ಷ್ಮಿ ಹಬ್ಬ ಜರುಗಿದೆ.

-ವರದಿ: ಟಿ.ಎಲ್.ಶ್ರೀನಿವಾಸ್