ವೀರಾಜಪೇಟೆ, ಆ. 4: ಪ್ರತಿಯೊಬ್ಬರೂ ನಿರ್ಮಲ ಮನಸ್ಸಿನಿಂದ ಸಾಂಪ್ರದಾಯಿಕ ಹಬ್ಬ ಹರಿದಿನಗಳನ್ನು ಆಚರಿಸಿ ಆಧ್ಯಾತ್ಮಿಕತೆಯ ಮಾರ್ಗ ದಿಂದ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ನೆಲೆಯೂರುವಂತೆ ಮಾಡಬೇಕು ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವರಮಹಾಲಕ್ಷ್ಮಿ ಪೂಜಾ ಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಇಂದು ಕಾವೇರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮೀಜಿ ಅವರು, ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಆóಷಾಡಮಾಸದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ, ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ಮೂಲಕ ಹಬ್ಬ ಹರಿದಿನಗಳು ಪ್ರಾರಂಭಗೊಳ್ಳುತ್ತವೆ. ವರಮಹಾಲಕ್ಷ್ಮಿ ಹಬ್ಬವು ಕೇವಲ ಸಂಪತ್ತಿಗೆ ಮಾತ್ರವಲ್ಲ, ಮಾನಸಿಕ, ದೈಹಿಕ, ಹಾಗೂ ಸಾಂಸ್ಕøತಿಕವಾಗಿ ಒಳಿತನ್ನು ಉಂಟು ಮಾಡುತ್ತದೆ. ದೇಶದ ಮಣ್ಣಿನ ಪ್ರತಿ ಕಣಕಣದಲ್ಲಿಯೂ ಧಾರ್ಮಿಕತೆಯನ್ನು ಹರಡುವ ಕೆಲಸ ಆಗುತ್ತಿದೆ. ಇಂತಹ ಧಾರ್ಮಿಕ ಆಚರಣೆಗಳು ಮನಸ್ಸಿನ ಮಲಿನವನ್ನು ತೊಡೆದು ಹಾಕಿ ಉತ್ತಮ ಸಂಸ್ಕಾರದತ್ತ ಕೊಂಡೊಯ್ಯುತ್ತದೆ. ಮೊದಲು ನಾವು ನಮ್ಮ ಶರೀರವನ್ನು ಆತ್ಮ ಸಾಕ್ಷಿಯಾಗಿ ದೇವಾಲಯದ ಸಮನಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಮನುಷ್ಯನ ಬದುಕಿನ ಮೌಲ್ಯ ಎಷ್ಟು ಶ್ರೇಷ್ಠ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿ ಮನಸ್ಸಿಗೆ ಸಂತೋಷ ಸಿಗಬೇಕಾದರೆ ಆಧ್ಯಾತ್ಮಿಕದ ಕಡೆಗೆ ಒತ್ತು ನೀಡಬೇಕು. ಧಾರ್ಮಿಕ ಸ್ವಾವಲಂಬನೆಯಿಂದ ಸ್ವಾತಂತ್ರ್ಯವನ್ನು ಕಾಣಬಹುದು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎಸ್. ಸೀತಾರಾಮ್ ಶೆಟ್ಟಿ ಮಾತನಾಡಿ, ನಾವು ನಮ್ಮ ಹಿಂದಿನ ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ನಮ್ಮ ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಮಾಡಿದರೆ ನಮ್ಮ ಸಂಸ್ಕಾರಗಳನ್ನು ಕಲಿಸಿಕೊಟ್ಟರೆ ಸಮಾಜದಲ್ಲಿ ಉತ್ತಮನಾಗಿ ಗುರುತಿಸಿಕೊಳ್ಳಹುದು ಎಂದು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಜಿಲ್ಲಾ ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಬಾನಂಗಡ ಅರುಣ್, ಪೂಜಾ ಸಮಿತಿ ಅಧ್ಯಕ್ಷೆ ಶೋಭಾ, ವೀರಾಜಪೇಟೆ ವಲಯಾಧಿಕಾರಿ ಸದಾಶಿವ ಉಪಸ್ಥಿತರಿದ್ದರು.