ಸೋಮವಾರಪೇಟೆ, ಆ.4: ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕಾಫಿ ಬೆಳೆಗಾರರಿಗೆ ಕಳೆದ 2015ರಿಂದ ಸಂದಾಯವಾಗಬೇಕಾದ ಕಾಫಿ ಸಹಾಯಧನ ರೂ. 83.45 ಕೋಟಿ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಒಪ್ಪಿಗೆ ನೀಡಿದ್ದಾರೆ.ಕಾಫಿ ಮಂಡಳಿಯನ್ನು ಪ್ರತಿನಿಧಿಸುವ ಕೊಡಗಿನ ಈರ್ವರು ಸದಸ್ಯರ ಸಹಿತ ಮಂಡಳಿಯ ಅಧ್ಯಕ್ಷರನ್ನು ಒಳಗೊಂಡ ನಿಯೋಗಕ್ಕೆ ಕೇಂದ್ರ ವಿತ್ತ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಂದು ವೇಳೆ ಭರವಸೆ ಶೀಘ್ರವಾಗಿ ಅನುಷ್ಠಾನಗೊಂಡರೆ ಕೊಡಗೂ ಸೇರಿದಂತೆ ಮಲೆನಾಡು ಭಾಗದಲ್ಲಿರುವ ಸಾವಿರಾರು ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ.
ಸೋಮವಾರಪೇಟೆಯ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ಕಾಫಿ ಮಂಡಳಿ ಸದಸ್ಯ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಹಾಗೂ ಶ್ರೀಮಂಗಲದ ಬೊಟ್ಟಂಗಡ ರಾಜು ಸೇರಿದಂತೆ ಕಾಫಿ ಮಂಡಳಿಯ ಅಧ್ಯಕ್ಷ ಬೋಜೇಗೌಡ, ಸದಸ್ಯರುಗಳಾದ ಚಿಕ್ಕಮಗಳೂರಿನ
(ಮೊದಲ ಪುಟದಿಂದ) ಪ್ರದೀಪ್ ಪೈ, ಕಲ್ಲೇಶ್, ಹಾಸನದ ಉದಯಕುಮಾರ್ ಅವರುಗಳು ನವದೆಹಲಿಯ ಸಂಸತ್ಭವನದಲ್ಲಿರುವ ಅರ್ಥ ಸಚಿವರ ಕಚೇರಿಯಲ್ಲಿ ಅರುಣ್ಜೇಟ್ಲಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದಿದ್ದು, ಸಚಿವರು ಶೀಘ್ರವಾಗಿ ಕಾಫಿ ಸಹಾಯಧನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.
ಕಳೆದ 2015ರಿಂದ ಎರಡು ವರ್ಷಗಳ ಅವಧಿಯಲ್ಲಿ ಕಾಫಿಗೆ ಸಹಾಯಧನ ಬಿಡುಗಡೆ ಮಾಡಿಲ್ಲ. ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಕಾರ್ಮಿಕರ ವೆಚ್ಚ, ಉತ್ಪಾದನಾ ವೆಚ್ಚಗಳು ಹೆಚ್ಚಾಗಿದ್ದು, ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಷ್ಟವಾದರೂ ಸಹ ಕಾಫಿ ಕೃಷಿಯನ್ನು ನಡೆಸಿಕೊಂಡು ಬರುತ್ತಿದ್ದು, ಇವರುಗಳಿಗೆ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಸಚಿವರ ಗಮನ ಸೆಳೆದ ಹಿನ್ನೆಲೆ, ಬಿಡುಗಡೆಗೆ ಬಾಕಿಯಿರುವ 83.45 ಕೋಟಿ ಹಣವನ್ನು ಒದಗಿಸುವದಾಗಿ ಅರುಣ್ ಜೇಟ್ಲಿ ತಿಳಿಸಿರುವದಾಗಿ ಕಾಫಿ ಮಂಡಳಿ ಸದಸ್ಯ ಅಭಿಮನ್ಯುಕುಮಾರ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ.ಎಸ್. ಯಡಯೂರಪ್ಪ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದು, ಅವರ ಮೂಲಕವೂ ಮನವಿ ಸಲ್ಲಿಸಲಾಗಿದೆ ಎಂದು ಅಭಿಮನ್ಯುಕುಮಾರ್ ತಿಳಿಸಿದ್ದಾರೆ. ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುಪಸ್ಥಿತಿಯಲ್ಲಿ ವಾಣಿಜ್ಯಿ ಇಲಾಖೆಯ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ನಿಯೋಗ ಕಾಫಿ ಸಹಾಯಧನದ ಬಗ್ಗೆ ವಿವರ ಮಾಹಿತಿ ಒದಗಿಸಿದೆ.
ಇದರೊಂದಿಗೆ ಕೊಡಗಿನಲ್ಲಿ ಇತ್ತೀಚಿನ ಮೂರು ವರ್ಷಗಳಿಂದ ಕಂಡುಬರುತ್ತಿರುವ ಆಫ್ರಿಕನ್ ದೈತ್ಯ ಶಂಕುಹುಳುವಿನ ಬಾಧೆಯ ಬಗ್ಗೆಯೂ ಮಾಹಿತಿ ನೀಡಿದ್ದು, ಕೇಂದ್ರ ಸಂಸದೀಯ ವ್ಯವಹಾರ ಮತ್ತು ರಸಗೊಬ್ಬರ ಪೂರೈಕೆ ಇಲಾಖಾ ಸಚಿವ ಅನಂತ್ಕುಮಾರ್ ಅವರ ಮೂಲಕ ಡಿಪಾರ್ಟ್ಮೆಂಟ್ ಆಫ್ ಕೆಮಿಕಲ್ ಅಂಡ್ ಪೆಟ್ರೋ ಕೆಮಿಕಲ್ ಡೈರೆಕ್ಟರ್ ಡಾ. ಜಿತೇಂದ್ರ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದೆ.
ಕೊಡಗಿಗೆ ವಿಜ್ಞಾನಿಗಳ ತಂಡ : ಶಂಕುಹುಳುವಿನ ಬಾಧೆಯಿಂದ ಕಾಫಿ ಸೇರಿದಂತೆ ಇನ್ನಿತರ ಕೃಷಿ ಬೆಳೆಗಳು ನಷ್ಟಕ್ಕೊಳಗಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸವಿಸ್ತಾರ ಮಾಹಿತಿ ಪಡೆದ ಡಾ. ಜಿತೇಂದ್ರಕುಮಾರ್ ಅವರು, ಆಫ್ರಿಕನ್ ಶಂಕುಹುಳುಗಳು ಬೇರೆ ಬೇರೆ ರಾಜ್ಯಗಳಲ್ಲೂ ಕಂಡುಬರುತ್ತಿದ್ದು, ಈ ಬಗ್ಗೆ ಸಂಶೋಧನೆ ನಡೆಸಿ ಹುಳುಗಳ ನಿಯಂತ್ರಣ ಸಂಬಂಧ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಕಂಡುಹಿಡಿಯಲು ದೆಹಲಿಯಿಂದಲೇ ನುರಿತ ವಿಜ್ಞಾನಿಗಳ ತಂಡವನ್ನು ಕೊಡಗಿಗೆ ಕಳುಹಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಅಭಿಮನ್ಯುಕುಮಾರ್ ತಿಳಿಸಿದ್ದಾರೆ.
ಇದರೊಂದಿಗೆ ಇದೇ ಮೊದಲ ಬಾರಿಗೆ ಕಾಫಿ ಮಂಡಳಿಗೆ ಕಾಫಿ ಬೆಳೆಗಾರರೋರ್ವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಈ ಕ್ರಮ ಸ್ವಾಗತಾರ್ಹವಾದರೂ ಹೆಚ್ಚಿನ ಅಧಿಕಾರ ಕಾರ್ಯದರ್ಶಿಗಳಲ್ಲಿಯೇ ಇದೆ. ಕಾಫಿಬೆಳೆಗಾರರ ಸಮಸ್ಯೆ ಬಗೆಹರಿಸಿ ಅವರುಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕಾಫಿ ಮಂಡಳಿಯ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ನಿಯೋಗ ಕೇಂದ್ರ ಸಚಿವರುಗಳಿಗೆ ಮನವಿ ಸಲ್ಲಿಸಿದೆ.
ಕಾಫಿ ಮಂಡಳಿಯ ನಿಯೋಗಕ್ಕೆ ದೆಹಲಿಯಲ್ಲಿ ಕೇಂದ್ರ ಸಾಂಖ್ಯಿಕ ಇಲಾಖಾ ಸಚಿವ ಸದಾನಂದಗೌಡ, ಸಂಸದರುಗಳಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಸಚಿವ ಅನಂತ್ಕುಮಾರ್ ಅವರ ಸಲಹೆಗಾರ ಬೇಕೇರಿ ನಾಗೇಶ್ ಅವರುಗಳು ಹೆಚ್ಚಿನ ಸಹಕಾರ ನೀಡಿದ್ದು, ನಮಗಳ ಮನವಿಯ ಬಗ್ಗೆ ಮತ್ತೊಮ್ಮೆ ಸಂಬಂಧಿಸಿದ ಇಲಾಖಾ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆಯುವದಾಗಿ ಭರವಸೆ ನೀಡಿದ್ದಾರೆ ಎಂದು ಅಭಿಮನ್ಯುಕುಮಾರ್ ತಿಳಿಸಿದರು.
- ವಿಜಯ್