ಕುಶಾಲನಗರ, ಆ. 4: ಸರಕಾರದ ಮೂಲಕ ಕಲ್ಪಿಸಲಾಗುವ ಮೂಲಭೂತ ಸೌಲಭ್ಯಗಳನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಕಾವೇರಿ ನೀರಾವರಿ ನಿಗಮದ ವತಿಯಿಂದ 12 ಕೋಟಿ ರೂ ವೆಚ್ಚದಲ್ಲಿ ವಿವಿಧೆಡೆ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಅಂಗವಾಗಿ ಯಡವನಾಡು ಮತ್ತು ಕುಶಾಲನಗರದ ಗೋಪಾಲ್ ಸರ್ಕಲ್ ಬಳಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾರಂಗಿ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ಕೆಲವು ಗ್ರಾಮಗಳಲ್ಲಿ ರಸ್ತೆಗಳು ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುಡ್ಡೆಹೊಸೂರಿನಿಂದ ಅತ್ತೂರು ಮೂಲಕ ಹಾರಂಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರೂ 4.80 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗುವದು. ಯಡವನಾಡು ವ್ಯಾಪ್ತಿಯಲ್ಲಿ ತಲಾ 95 ಲಕ್ಷ ರೂ ವೆಚ್ಚದಲ್ಲಿ ಎರಡು ರಸ್ತೆಗಳು, ರೂ 2.8 ಕೋಟಿ ವೆಚ್ಚದಲ್ಲಿ ಮುಳ್ಳುಸೋಗೆ ಹಾರಂಗಿ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯಲಿದೆ ಎಂದರು. ರಂಗಸಮುದ್ರ ವ್ಯಾಪ್ತಿಯ ರಸ್ತೆಯನ್ನು 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವದು ಎಂದು ಮಾಹಿತಿ ನೀಡಿದರು. ಕಾಮಗಾರಿ ಸಂದರ್ಭ ಗುಣಮಟ್ಟ ಕಾಪಾಡುವದರೊಂದಿಗೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಿಸುವಲ್ಲಿ ಇಲಾಖಾ ಅಧಿಕಾರಿಗಳು ಗಮನಹರಿಸಬೇಕೆಂದರು.

ಯಡವನಾಡು ಮತ್ತು ಅತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಪುನರ್ವಸತಿ ಶಿಬಿರಗಳಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ರೂ 20 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಸದಸ್ಯೆ ಮಂಜುಳಾ, ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಇಂಜಿನಿಯರ್ ಸತ್ಯ, ಮುಳ್ಳುಸೋಗೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಭವ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಮುಖರಾದ ಶಿವಾನಂದ, ಚಿಲ್ಲನ ಗಣಿಪ್ರಸಾದ್, ಪಂಚಾಯಿತಿ ಸದಸ್ಯರುಗಳು ಇದ್ದರು.