ಗೋಣಿಕೊಪ್ಪಲು, ಆ. 4 : ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ, ಸಂಬಂಧಿಕರ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ಧಾಳಿ ಕೇಂದ್ರ ಸರ್ಕಾರ ಮಾಡಿರುವ ಹುನ್ನಾರ ಎಂದು ಆರೋಪಿಸಿ ಗೋಣಿಕೊಪ್ಪ ನಗರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಮಾಜಿ ಜಿ.ಪಂ. ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ರಾಜಕೀಯ ದುರುದ್ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ದ ಷಡ್ಯಂತ್ರ ರೂಪಿಸುತ್ತಿರುವ ಮೋದಿ ಸರ್ಕಾರದ ನಡೆ ಖಂಡನೀಯ. ಇದಕ್ಕೆ ಮತದಾರರು ಚುನಾವಣೆ ಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, ಮತಕ್ಕಾಗಿ ಪಕ್ಷದ ಮೇಲೆ ಕಳಂಕ ತರುತ್ತಿರುವ ಮೋದಿ ನಡೆ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಮಹಿಳಾ ಘಟಕದ ಅಧ್ಯಕ್ಷ ಕುಸುಮಾವತಿ ಮಾತನಾಡಿ, ಕೇಂದ್ರ ಸರ್ಕಾರದ ಧೋರಣೆಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕರ್ತಂಡ ಸೋಮಣ್ಣ, ಉಪಾಧ್ಯಕ್ಷ ಶರ್ಫುದ್ದೀನ್, ಟಿ.ಶೆಟ್ಟಿಗೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ಸೋಮಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮುರುಗಾ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ಸಿಂಗಿ, ವೀರಾಜಪೇಟೆ ಪ.ಪಂ ಸದಸ್ಯ ಮಹಮ್ಮದ್ ರಫಿ, ನಗರ ಅಲ್ಪಸಂಖ್ಯಾತ ಘಟಕಧ್ಯಾಕ್ಷ ಕಲೀಮುಲ್ಲ, ಜಿ.ಪಂ ಸದಸ್ಯೆ ಪಿ.ಆರ್ ಪಂಕಜ, ತಾ.ಪಂ ಸದಸ್ಯೆ ಆಶಾ ಜೇಮ್ಸ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.