ಗೋಣಿಕೊಪ್ಪಲು, ಆ. 4: ಕೊಡಗಿನ ಮೂಲನಿವಾಸಿಗಳಾದ ಗಿರಿಜನರ ಹಾಡಿಗಳ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ನಿವಾರಣೆಗೆ ಮುಂದಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಭರವಸೆ ನೀಡಿದರು.

ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಬೊಂಬುಕಾಡು ಹಾಡಿಯ ಸಂಪರ್ಕ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಮಾಜದ ಮುಖ್ಯ ವಾಹಿನಿಗೆ ಬಾರದೆ ಕಾಡಿನಲ್ಲಿ ಜೀವನ ಕಟ್ಟಿಕೊಂಡಿರುವ ಬುಡಕಟ್ಟು ನಿವಾಸಿಗಳಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆ ನಮ್ಮೊಂದಿಗೆ ಕೈ ಜೋಡಿಸಿದರೆ ಗಿರಿಜನರ ಅಭಿವೃದ್ಧಿ ಸಾಧ್ಯವಾಗಲಿದೆ ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲಾಗುವದು ಎಂದರು.

14ನೇ ಹಣಕಾಸು ಯೋಜನೆ ಯಡಿಯಲ್ಲಿ ರೂ. 1.75 ಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಬ್ಬಿಣದ ಸೇತುವೆ ನಿರ್ಮಿಸಿದ್ದು ಇದು ಇಲ್ಲಿನ ಜನಕ್ಕೆ ಉಪಯೋಗಕಾರಿ ಎಂದು ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಹೇಳಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿನಯ್ ಕುಮಾರ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ್, ಶಾಂತಮ್ಮ, ಚುಬ್ರು, ಹಾಡಿ ಮುಖ್ಯಸ್ಥರಾದ ರವಿ, ಮಾರ, ವೈದ್ಯರಾದ ಮಧ್ಯಸ್ಥ ಹಾಜರಿದ್ದರು.