ಸುಂಟಿಕೊಪ್ಪ, ಆ. 4: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸೇರಿದ ಕೆಲವು ಕಡೆ ಕೃಷಿ ಜಮೀನನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿ ಬಡಾವಣೆ ನಿರ್ಮಿಸಲಾಗಿದೆ. ಈ ಬಡಾವಣೆ ನಿರ್ಮಿಸುವಾಗ ನಗರ ಮತ್ತು ಗ್ರಾಮೀಣಾ ಯೋಜನಾ ಇಲಾಖೆಯಿಂದ ಕಾನೂನು ಬದ್ಧವಾಗಿ ಬಡಾವಣೆಯ ನಕ್ಷೆಯ ಅನುಮೋದನೆ ಪಡೆಯದೆ ಇರುವದರಿಂದ ಬಡಾವಣೆಯ ಜಾಗ ಖರೀದಿಸಿದವರು ಗ್ರಾ.ಪಂ. ನಿಂದ ನಮೂನೆ -11 ಬಿ ಲಭಿಸದೆ ಅತಂತ್ರಸ್ಥಿತಿಗೆ ಒಳಗಾಗಿದ್ದಾರೆ.
1999 ಹಾಗೂ 2000 ಇಸವಿಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ರಾಮಬಡಾವಣೆ, ಗುಡ್ಡಪ್ಪರೈ, ಶಿವರಾಂ ರೈ ಹಾಗು ಪಾರ್ವತಮ್ಮ ಬಡಾವಣೆಯನ್ನು ಮಾಲೀಕರುಗಳು ಗ್ರಾಮ ಪಮಚಾಯಿತಿ ಸಮಕ್ಷಮದಲ್ಲಿ ಭೂಪರಿವರ್ತನೆಗೆ ಮಾಡಲಾಗಿದೆ. ಆನಂತರ ಲಕ್ಷ್ಮಿ ಬಡಾವಣೆ ವಾಸುದೇವ ಬಡಾವಣೆ ಹಾಗೂ ಗಿರಿಯಪ್ಪ ಬಡಾವಣೆ ನಿರ್ಮಾಣಗೊಂಡಿತ್ತು.
ನಮೂನೆ 11ಬಿ ಸಿಗುತ್ತಿಲ್ಲ: ಈ ಹಿಂದಿನ ಆಡಳಿತ ಮಂಡಳಿಯವರು ಆಗಿನ ಸರಕಾರದ ಆದೇಶದಂತೆ ನಮೂನೆ 11ಬಿಯನ್ನು ಬಡಾವಣೆಯ ಭೂಮಾಲೀಕರಿಂದ ಭೂಮಿ ಖರೀದಿಸಿದವರು ನೀಡಲಾಗುತ್ತಿತ್ತು, ಇದರಿಂದ ಬ್ಯಾಂಕ್ ಸಾಲ ಪಡೆದು ಆನೇಕರು ಮನೆಯನ್ನು ನಿರ್ಮಿಸಿದ್ದರು ಆದರೆ ಈಗಿನ ಪಿಡಿಓ ಬಡಾವಣೆಯ ಮಾಲೀಕರಿಂದ ಭೂಮಿ ಖರೀದಿಸಿದವರಿಗೆ ನಮೂನೆ 11ಬಿ ನೀಡುತ್ತಿಲ್ಲ ಆದುದರಿಂದ ಬಹಳಷ್ಟು ಮಂದಿಗೆ ತೊಂದರೆಯಾಗುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಇತ್ತೀಚೆಗೆ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದಲ್ಲದೆ ಈ ವ್ಯವಸ್ಥೆ ಸರಿಪಡಿಸದಿದ್ದರೆ ಪಂಚಾಯಿತಿ ಕಾರ್ಯಗಳಿಗೆ ಅವಕಾಶ ನೀಡುವದಿಲ್ಲ ಎಂದು ಎಚ್ಚರಿಸಿದರು.
ಕಾನೂನು ಏನು ಹೇಳುತ್ತದೆ?: ಜಿಲ್ಲಾಪಂಚಾಯಿತಿಯಿಂದ ಸರಕಾರದ ಸುತ್ತೋಲೆ ಪ್ರಕಾರ ಬಡಾವಣೆಯ ನಕ್ಷೆಯನ್ನು ಗ್ರಾಮೀಣ ಯೋಜನಾ ಇಲಾಖೆಯ ಪ್ರಾಧಿಕಾರದಿಂದ ಅನುಮೋದನೆಗೊಳ್ಳಬೇಕು. ಸರ್ಕಾರ ಸುತ್ತೋಲೆ ಸಂಖ್ಯೆ 2006ರ ಪ್ರಕಾರ ಭೂಪರಿವರ್ತನೆ ಆದ ನಂತರ ಏಕ ನಿವೇಶನ ಎಂಬದಾಗಿ ಪರಿಗಣಿಸಿ ಭೂಪರಿವರ್ತನೆಯಾದ ಪೂರ್ಣಜಾಗಕ್ಕೆ ನಮೂನೆ-11ಬಿ ವಿತರಿಸಲು ಅವಕಾಶವಿರುತ್ತದೆ ಹಾಗೂ ಸರ್ಕಾರದ ಪತ್ರ ಸಭೆ ಗ್ರಾಅಪ:86:ಗ್ರಪ 2014 ದಿನಾಂಕ 11.11.2014 ರಲ್ಲಿ ಭೂಪರಿವರ್ತಿತ ಜಮೀನಿನ ಬಡಾವಣೆ ವಿನ್ಯಾಸದ ಬಗ್ಗೆ ತಿಳಿಸಲಾಗಿದ್ದು ಭೂ ಮಾಲೀಕರು 1 ಎಕ್ರೆಯಲ್ಲಿ 44 ಸೆಂಟು ಜಾಗವನ್ನು ಗ್ರಾ.ಪಂ.ಗೆ ನೀಡಬೇಕಾಗುತ್ತದೆ ಈ ಕಾನೂನು ಇಲ್ಲಿ ಪಾಲಿಸದೆ ಇರುವದರಿಂದ ನಮೂನೆ 11ಬಿ ನೀಡಲು ಸಾಧ್ಯವಾಗುವದಿಲ್ಲ ಎಂದು ಪಿಡಿಓ ಮೇದಪ್ಪ ತಿಳಿಸಿದ್ದಾರೆ.
ಹಾಗೊಮ್ಮೆ ಕಾನೂನನ್ನು ಮೀರಿ ಸಕ್ಷಮ ಪ್ರಾಧಿಕಾದಿಂದ ಬಡಾವಣೆ ನಕ್ಷೆ ಅನುಮೋದನೆಗೊಳ್ಳದೆ ನಿವೇಶನಗಳನ್ನಾಗಿ ಪರಿವರ್ತಿಸಿ ನಮೂನೆ-ಬಿ ವಿತರಿಸಿದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಲ್ಲಾ ಸದಸ್ಯರುಗಳು ಹಾಗೂ ಬಡಾವಣೆ ಮಾಲೀಕರ ವಿರುದ್ಧ ಕ್ರಿಮಿನಲ್ ಹೂಡುವ ಅವಕಾಶವಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಸಂಕಷ್ಟದಲ್ಲಿ ಜಾಗ ಖರೀದಿದಾರರು: ಬಡಾವಣೆ ಜಾಗ ಖರೀದಿಸಿಯಾಗಿದೆ ಭೂ ಖರೀದಿ ನಿಯಮಗಳನ್ನೆಲ್ಲಾ ಚಾಚು ತಪ್ಪದೆ ಪಾಲಿಸಲಾಗಿದೆ.ಜಾಗ ಖರೀದಿ ಮೊತ್ತವನ್ನು ಪಾವತಿಸಲಾಗಿದೆ. ಈ ಗ್ರಾ.ಪಂ.ನಿಂದ ನಮೂನೆ 11 ಬಿ ಲಭಿಸದೆ ಇರುವದರಿಂದ ಬಹಳಷ್ಟು ಮಂದಿ ಸಂಕಷ್ಟದಲ್ಲಿ ಸಿಲಿಕಿದ್ದಾರೆ.
ಹಿಂದಿನ ಪಿಡಿಓ ಅವರುಗಳು ಬಡಾವಣೆ ಖರೀದಿ ಮಾಡಿದ ಜಾಗಕ್ಕೆ ನಮೂನೆ 11ಬಿ ನೀಡಿದ್ದಾರೆ ನಮಗೇಕೆ ಇಲ್ಲ ಎಂದು ನೊಂದವರ ಪ್ರಶ್ನೆಯಾಗಿದೆ.
ಭೂಪರಿವರ್ತನೆ ಕಾನೂನಿನ ಚಕ್ರವ್ಯೂಹವನ್ನು ಭೇದಿಸಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಈನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕಾಗಿದೆ ಆದರೆ ಬೆಕ್ಕಿಗೆ ಘಂಟೆ ಕಟ್ಟುವರ್ಯಾರು!
ಈ ಎಲ್ಲಾ ಬೆಳವಣಿಗೆಗಳ ನಡುವೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಖುದ್ದು ಭೇಟಿ ನೀಡಿದ್ದ ಕೊಡಗು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನೂತನವಾಗಿ ನಿರ್ಮಾಣ ಗೊಂಡಿರುವ ಬಡಾವಣೆಗಳನ್ನು ಅಧಿಕಾರಿ ಹಾಗೂ ಅಧ್ಯಕ್ಷರೊಂದಿಗೆ ತೆರಳಿ ಪರಿಶೀಲಿಸಿದರು.
ಸಮಸ್ಯೆಯು ಜಿಲ್ಲಾಧಿಕಾರಿಗಳ ಅಂಗಳದಲ್ಲಿದ್ದು ಮುಂದೆನಾಗ ಬಹುದು ಎನ್ನಲು ಕಾದು ನೋಡುವಂತಾಗಿದೆ.
?ಬಿ.ಡಿ. ರಾಜುರೈ