ಕುಶಾಲನಗರ, ಆ. 4: ತಕ್ಷಣ ಹಾರಂಗಿ ಅಣೆಕಟ್ಟೆಯಿಂದ ಕಾಲುವೆ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬೆಳೆಗಳಿಗೆ ನೀರು ಹರಿಸದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಎಚ್ಚರಿಸಿದ್ದಾರೆ.ಹಾರಂಗಿ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿಯಲ್ಲಿ ರೈತರ ಬೆಳೆಗಳಿಗೆ ನೀರು ಒದಗಿಸಬೇಕೆಂದು ಆಗ್ರಹಿಸಲಾಗಿದ್ದರೂ ಕೂಡ ಅಧಿಕಾರಿಗಳು ಇದುವರೆಗೆ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ.
(ಮೊದಲ ಪುಟದಿಂದ) ಕುಡಿವ ನೀರು, ಹಾಗೂ ಕೆರೆ ಕಟ್ಟೆಗಳಿಗೆ ಮಾತ್ರ ನದಿ ಮೂಲಕ ನೀರು ಹರಿಸಲಾಗುತ್ತಿದೆ. ಕೂಡಲೆ ಮತ್ತೊಂದು ಸಭೆ ಏರ್ಪಡಿಸಿ ಚರ್ಚಿಸಿ ಕಾಲುವೆ ಮೂಲಕ ನೀರು ಹರಿಸಲು ಮುಂದಿನ 5 ದಿನದೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ನಾಲೆಗೆ ನೀರು ಹರಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವದು ಎಂದು ಅವರು ಎಚ್ಚರಿಸಿದರು.
ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕಿದೆ. ಈಗಾಗಲೆ ಜಿಲ್ಲೆಗೆ ಘೋಷಿಸಿದ ಅನುದಾನ ಸಂಪೂರ್ಣವಾಗಿ ಬಿಡುಗಡೆಗೊಂಡಿಲ್ಲ. ಬಜೆಟ್‍ನಲ್ಲಿ ಘೋಷಿಸಿದ 200 ಕೋಟಿ ರೂಗಳ ಪೈಕಿ ಕೇವಲ 41 ಕೋಟಿ ಮಾತ್ರ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಕೂಡ ತರಲಾಗುವದು ಎಂದರು.
ಈಗಾಗಲೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಸರಕಾರ 50 ಕೋಟಿ ರೂಗಳ ಟೆಂಡರ್ ಆಹ್ವಾನಿಸಿದ್ದು ಅನುದಾನ ಬಿಡುಗಡೆಗೊಳ್ಳುವ ಅನುಮಾನದಿಂದಾಗಿ ಯಾವ ಗುತ್ತಿಗೆದಾರರು ಕೂಡ ಇದರಲ್ಲಿ ಪಾಲ್ಗೊಳ್ಳಲು ಮುಂದಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಜಲಾಶಯದ ಆವರಣದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಶಾಸಕರು ಪೂಜೆ ಸಲ್ಲಿಸಿದರು. ರಾಜ್ಯ ಸೇರಿದಂತೆ ನೆರೆಯ ರಾಜ್ಯದ ರೈತರ ಬೆಳೆಗೆ ಹಾಗೂ ಜನತೆಗೆ ಕುಡಿಯುವ ನೀರಿಗೆ ಕೊರತೆ ಎದುರಾಗದಂತೆ ಕಾವೇರಿ ಮಾತೆ ಅನುಗ್ರಹಿಸಬೇಕಿದೆ. ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಲ್ಲಿ ವರುಣ ದೇವ ಕೃಪೆ ತೋರಬೇಕೆಂದು ಅವರು ಈ ಸಂದರ್ಭ ಪ್ರಾರ್ಥಿಸಿದರು.
ಕೊಡಗು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಶ್ರೀನಿವಾಸ್, ಕೆ.ಆರ್.ಮಂಜುಳಾ, ತಾಲೂಕು ಪಂಚಾಯ್ತಿ ಸದಸ್ಯ ಗಣೇಶ್, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಕೂಡಿಗೆ ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಕೆ.ಟಿ.ಗಿರೀಶ್, ಕೂಡುಮಂಗಳೂರು ಗ್ರಾಮಪಂಚಾಯ್ತಿ ಸದಸ್ಯ ಭಾಸ್ಕರ್ ನಾಯಕ್, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಉಪಾಧ್ಯಕ್ಷ ಗಣಿಪ್ರಸಾದ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧರ್ಮರಾಜು, ನಾಗರಾಜು ಮತ್ತಿತರರು ಇದ್ದರು.