ಆಲೂರು ಸಿದ್ದಾಪುರ,ಆ.4: ಆಲೂರುಸಿದ್ಧಾಪುರ ಗ್ರಾಮಪಂಚಾಯಿತಿಗೆ ಒಳಪಡುವ ಹೊಸಳ್ಳಿ ಗ್ರಾಮದಲ್ಲಿ ನಾಲ್ಕೈದು ಗಿರಿಜನ ಕುಟುಂಬಗಳು ಸೇರಿದಂತೆ ಸುಮಾರು 6ರಿಂದ 7 ಇತರ ಕುಟುಂಬಗಳು ವಾಸಿಸುತ್ತಿದ್ದು ಇವರು ಇಂದಿಗೂ ಖಾಸಗಿ ವ್ಯಕ್ತಿಯೊಬ್ಬರ ಕೊಳವೆ ಬಾವಿಯಿಂದ ನೀರನ್ನು ತರುವ ಪರಿಸ್ಥಿತಿ ಇಲ್ಲಿಯವರದ್ದಾಗಿದೆ.

ಈ ಗ್ರಾಮದಲ್ಲಿ ಸುಮಾರು 8 ವರ್ಷದಹಿಂದೆ ಜಿಲ್ಲಾಪಂಚಾಯಿತಿಯಿಂದ ಕಿರು ನೀರು ಸರಬರಾಜು ಟ್ಯಾಂಕನ್ನು ನಿರ್ಮಿಸಿದ್ದರು ಇದಕ್ಕೆ ನೀರು ಸರಬರಾಜು ಮಾಡಬೇಕು ಎನ್ನುವಷ್ಟರಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಿರುವದರಿಂದ ಕಾಡಾನೆ ಮುಟ್ಟಿದ ತಕ್ಷಣ ಆ ಟ್ಯಾಂಕ್ ನೆಲ್ಲಕ್ಕುರುಳಿತು, ಆ ನಂತರ ಟ್ಯಾಂಕನ್ನು ಸರಿಪಡಿಸಲು ಸಂಬಂಧಪಟ್ಟವರು ಯಾರೂ ಮುಂದಾಗದಿರುವದು ವಿಪರ್ಯಾಸ.

ಕಳೆದ 10 ವರ್ಷದ ಹಿಂದಿನ ಜಿಲ್ಲಾಪಂಚಾಯಿತಿಯ ಸದಸ್ಯರ ಹಾಗೂ ಅಂದಿನ ಗ್ರಾಮಪಂಚಾಯಿತಿ ಸದಸ್ಯರ ತಿಕ್ಕಾಟದಿಂದಾಗಿ ಇಲ್ಲಿಯ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗಿರುವದು ವಾಸ್ತವವಾಗಿದೆ.

ಆನಂತರದಲ್ಲಿ ಬಂದ ಜಿಲ್ಲಾಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಬಿದ್ದುಹೋದ ಕುಡಿಯುವ ನೀರಿನ ಟ್ಯಾಂಕನ್ನು ಸರಿ ಪಡಿಸಲು ಮುಂದಾಗಲಿಲ್ಲ. ಬದಲಿಗೆ ಅಂದಿನ ಜಿಲ್ಲಾಪಂಚಾಯಿತಿ ಸದಸ್ಯರು ಪಕ್ಕದಲ್ಲೆ ಖಾಸಗಿ ವ್ಯಕ್ತಿಯೊಬ್ಬರಿಗೆ ಕುಡಿಯುವ ನೀರನ್ನು ತಮ್ಮ ಕೊಳವೆ ಬಾವಿಯಿಂದ ಒದಗಿಸಲು ಸೂಚಿಸಿದ್ದರಿಂದ ಅವರು ಇವರು ಹೇಳುವ ಮೊದಲೆ ಮಾನವೀಯತೆ ದೃಷ್ಟಿಯಿಂದ ಕುಡಿಯುವ ನೀರನ್ನು ಒದಗಿಸಿದ್ದಾರೆ. ಇವರಿಗೆ ಪಂಚಾಯಿತಿ ಯಾವದೆ ನೀರಿನ ತೆರಿಗೆಯನ್ನು ನೀಡುತ್ತಿಲ್ಲ, ಅದರೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಂಪೂರ್ಣ ಕಾಮಾಗಾರಿ ಮುಗಿದ ನೀರು ಒದಗಿಸಲಾಗುತ್ತಿದೆ ಎಂದು ದಾಖಲೆಯಲ್ಲಿದ್ದು, ಅನುದಾನ ಸಂಪೂರ್ಣವಾಗಿ ಬಳಕೆಯಾಗಿದೆ,

ಇದೀಗ ಈ ಟ್ಯಾಂಕ್ ಸುತ್ತ ಕಾಡು ತುಂಬಿದ್ದು ಸಾವಿರಾರು ರೂ ವೆಚ್ಚ ಮಾಡಿ ಈ ರೀತಿಯ ಅವ್ಯವಸ್ಥೆಯಾದರೆ ನಮ್ಮ ಜನಪ್ರತಿನಿದಿಗಳ ವ್ಯವಸ್ಥೆ ಎತ್ತ ಸಾಗುತ್ತಿದೆ ಒಂದು ಕುಡಿಯುವ ನೀರಿನ ಟ್ಯಾಂಕ್ ಸರಿಪಡಿಸಲು ಸುಮಾರು 8 ವರ್ಷ ಬೇಕೆ? ಎಂಬದು ಗ್ರಾಮಸ್ಥರ ಪ್ರಶ್ನೆ.