ಶನಿವಾರಸಂತೆ, ಆ. 5: ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಮನೆ ಸೇರಿದಂತೆ ಇನ್ನಿತರೆಡೆಗಳಲ್ಲಿ ನಡೆದಿರುವ ಐಟಿ ಧಾಳಿಯನ್ನು ವಿರೋಧಿಸಿ ಕೊಡ್ಲಿಪೇಟೆ ಕಾಂಗ್ರೆಸ್ ಕಾರ್ಯಕರ್ತರು ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಐಟಿ ಧಾಳಿಯನ್ನು ವಿರೋಧಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಿವಕುಮಾರ್ ಅವರಿಗೆ ಜೈಕಾರ ಹಾಕಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಐಟಿ ಧಾಳಿಯಿಂದ ಬಿಡುಗಡೆಗೊಂದಿ ಹೊರಬಂದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗ್‍ಜೇಬ್, ಬ್ಯಾಡಗೊಟ್ಟ ಕಾಂಗ್ರೆಸ್ ವಲಯಾಧ್ಯಕ್ಷ ಮಹಮ್ಮದ್ ಹನೀಫ್, ತಾಲೂಕು ಎಸ್ಸಿ ಘಟಕದ ಕಾರ್ಯದರ್ಶಿಗಳಾದ ಜನಾರ್ಧನ, ಜಗದೀಶ್, ಪ್ರಮುಖರಾದ ಫೈಜು, ಪ್ರಸನ್ನ, ಅಬೂಬಕ್ಕರ್, ವೀರಭದ್ರ, ಹೂವಣ್ಣ, ಮೆಹಬೂಬ್, ಸುನೀಲ್, ಲಂಕೇಶ್, ನಿಜಾಮುದ್ದೀನ್ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.