ಮಡಿಕೇರಿ, ಆ. 5: ರಾಜ್ಯದಲ್ಲಿ ಸಾಗುವಳಿ ಮಾಡದೆ ಪಾಳುಬಿಟ್ಟಿರುವ ಜಮೀನನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 84ರ ಅನ್ವಯ ಸಾಗುವಳಿಗೆ ಒಳಪಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರಕಾರದಿಂದ ಸೂಚನೆ ಹೊರಡಿಸಲಾಗಿದೆ. ಕಾನೂನಿನಂತೆ ಈ ಬಗ್ಗೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು 25-5-2017ರಂದು ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದರಂತೆ ಉಪವಿಭಾಗಾಧಿ ಕಾರಿಗಳು ಹೋಬಳಿವಾರು, ಗ್ರಾಮವಾರು ಪಟ್ಟಿ ತಯಾರಿಸುವಂತೆ ಜಿಲ್ಲೆಯ ಎಲ್ಲಾ ಕಂದಾಯ ಪರಿವೀಕ್ಷಕರಿಗೆ ಒಂದು ತಿಂಗಳ ಹಿಂದೆಯೇ ನಿರ್ದೇಶನ ನೀಡಿ 15 ದಿವಸಗಳ ಕಾಲಾವಕಾಶ ನೀಡಿರುವ ವಿಚಾರ ‘ಶಕ್ತಿ’ಗೆ ತಿಳಿದುಬಂದಿದೆ. ಉಪವಿಭಾಗಾಧಿ ಕಾರಿಗಳು ಹೊರಡಿಸಿರುವ ಜ್ಞಾಪನಾ ಪತ್ರದ ವಿವರ ಇಂತಿದೆ:-
ಆಹಾರ ಭದ್ರತೆಯ ದೃಷ್ಟಿಯಿಂದ ರಾಜ್ಯದಲ್ಲಿ ಸಾಗುವಳಿ ಮಾಡದೆ ಪಾಳು ಬಿಟ್ಟಿರುವ ಜಮೀನನ್ನು ಸಾಗುವಳಿಗೆ ಒಳಪಡಿಸಿ ಉಪಯೋಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ರಾಜ್ಯ ಸರಕಾರವು ಮನಗಂಡಿರುತ್ತದೆ. ಈ ನಿಟ್ಟಿನಲ್ಲಿ ಯಾವದೇ ಜಮೀನನ್ನು ಸಕಾರಣಗಳಿಲ್ಲದೆ ಸತತ ಎರಡು ವರ್ಷಗಳಿಗೆ ಕಡಿಮೆ ಇಲ್ಲದ ಅವಧಿಗೆ ಸಾಗುವಳಿ ಮಾಡದೆ ಪಾಳು ಬಿಡಲಾಗಿದ್ದರೆ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಅಂತಹ ಭೂ ಮಾಲೀಕರಿಗೆ ಅಥವಾ ಜಮೀನಿನ ಸುಪರ್ದಿಯಲ್ಲಿರುವ ವ್ಯಕ್ತಿಗೆ ನೋಟೀಸ್ ಜಾರಿ ಮಾಡಿ ಅಂತಹ ನೋಟೀಸ್ ಜಾರಿ ಮಾಡಿದ ದಿನಾಂಕದಿಂದ ಒಂದು ವರ್ಷದೊಳಗೆ ಸದರಿ ಜಮೀನನ್ನು ಸಾಗುವಳಿಗೆ ಒಳಪಡಿಸಲು ಕ್ರಮವಹಿಸಬೇಕೆಂದು ತಿಳಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 84ರಡಿ ಅಧಿಕಾರವಿದೆ. ಸಾಗುವಳಿ ಮಾಡದೆ ಪಾಳು ಬಿಟ್ಟಿರುವ ಜಮೀನನ್ನು ಸಾಗುವಳಿಗೆ ಒಳಪಡಿಸಲು ಸಂಬಂಧಪಟ್ಟ ಉಪ ವಿಭಾಗಾದಿ üಕಾರಿಗಳ ಮೂಲಕ
(ಮೊದಲ ಪುಟದಿಂದ) ಅವಶ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಉಲ್ಲೇಖಿತ ಪತ್ರದಲ್ಲಿ ನಿರ್ದೇಶನ ನೀಡಿರುತ್ತಾರೆ.
ಸರ್ಕಾರದ ಪತ್ರದ ನಿರ್ದೇಶನ ದಂತೆ ಕ್ರಮ ವಹಿಸುವಲ್ಲಿ ಪ್ರಥಮ ಹಂತದ ಕಾರ್ಯಕ್ರಮವು ಸಾಗುವಳಿ ಮಾಡದೆ ಬಿಟ್ಟಿರುವ ಜಮೀನಿನ ವಿವರವನ್ನು ಸಂಗ್ರಹಿಸಬೇಕಾಗುತ್ತದೆ. ಸಾಗುವಳಿ ಇರುವ ಜಮೀನಿನ ಅಂಕಿ - ಅಂಶ ಎಲ್ಲಾ ಗ್ರಾಮ ಲೆಕ್ಕಿಗರ ಬಳಿ ಇರುತ್ತದೆ. ಸದರಿ ಅಂಕಿ - ಅಂಶವಲ್ಲದೆ ಹೆಚ್ಚುವರಿಯಾಗಿ ಪಾಳುಬಿಟ್ಟಿರುವ ಜಮೀನನ್ನು ಕೂಡಾ ಗ್ರಾಮ ಲೆಕ್ಕಿಗರು ಪರಿಶೀಲಿಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೋಬಳಿಯ ಎಲ್ಲಾ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಪಾಳು ಬಿಟ್ಟಿರುವ ಜಮೀನಿನ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಹೋಬಳಿವಾರು, ಗ್ರಾಮವಾರು ಪಟ್ಟಿ ಮಾಡುವದು. ಭೂ ಮಾಲೀಕರ ಹೆಸರು, ಜಮೀನಿನ ನಿಬಂಧನೆ, ಸರ್ವೆ ನಂಬರ್, ವಿಸ್ತೀರ್ಣ, ಮಳೆಯಾಧಾರಿತ, ನೀರಾವರಿ ಆಧಾರಿತ, ಎಷ್ಟು ವರ್ಷಗಳಿಂದ ಪಾಳು ಬಿಡಲಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಗ್ರಾಮವಾರು ಹಾಗೂ ಹೋಬಳಿವಾರು ವಿವರವಾದ ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ಎಲ್ಲಾ ಕಂದಾಯ ಪರಿವೀಕ್ಷಕರಿಗೆ ಸೂಚಿಸಲಾಗಿದೆ.
ಕೊಡಗು ಜಿಲ್ಲೆಯ ಬಗ್ಗೆ ಒಂದಿಷ್ಟು ಮಾಹಿತಿ
ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 30 ವರ್ಷದ ಹಿಂದೆ ಭತ್ತದ ಕೃಷಿ ಮಾಡುವ 40 ಸಾವಿರ ಹೆಕ್ಟೇರ್ ಜಮೀನು ಇತ್ತು. ಆದರೆ ಪ್ರಸ್ತುತ ಇದು ಕಡಿಮೆ ಯಾಗಿರುವದು, ಪಾಳುಬಿಟ್ಟಿರುವದು ಬಹುತೇಕ ಎಲ್ಲರಿಗೂ ಗೊತ್ತು. ಕೃಷಿ ಇಲಾಖೆ ಪ್ರಸ್ತುತ 30,500 ಹೆಕ್ಟೇರ್ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಿದೆ. ಕಳೆದ ವರ್ಷ 31 ಸಾವಿರ ಹೆಕ್ಟೇರ್ ಗುರಿ ಹೊಂದಿದ್ದು, ಇದರಲ್ಲಿ 28,090 ಹೆಕ್ಟೇರ್ನಲ್ಲಿ ಮಾತ್ರ ಸಾಧನೆಯಾಗಿದೆ. ಈ ಕಾರಣದಿಂದಾಗಿ ಈ ಬಾರಿ 30,500 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ. ಕೃಷಿ ಇಲಾಖೆ ಕಂದಾಯ ಇಲಾಖೆಯ ಮೂಲಕ ಸಂಗ್ರಹಿಸಿದ್ದ ಹಿಂದಿನ ಮಾಹಿತಿಯಂತೆ ಮಡಿಕೇರಿ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 16 ಸಾವಿರ ಹೆಕ್ಟೇರ್ ಕೃಷಿ ಜಮೀನು ಹೊಂದಿತ್ತು.
30,500 ಹೆಕ್ಟೇರ್ನ ಗುರಿ ನಿಗದಿಪಡಿಸಲಾಗಿದೆ ಎಂಬದು ಇಲಾಖೆಯ ಮಾಹಿತಿ ಆದರೆ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಅದೆಷ್ಟೋ ಬದಲಾವಣೆಗಳನ್ನು ಗಮನಿಸಿರುವ ಜನರು ಇದನ್ನು ಒಪ್ಪುವದು ಕಷ್ಟಸಾಧ್ಯ. ಏಕೆಂದರೆ ಹಲವಾರು ಕಾರಣಗಳಿಂದ ವರ್ಷಂಪ್ರತಿ ಗದ್ದೆಗಳನ್ನು ಪಾಳು ಬಿಡುತ್ತಿರುವದೇ ಹೆಚ್ಚಾಗಿ ಕಂಡು ಬರುತ್ತಿರುವದು, ಅದೆಷ್ಟೋ ಪ್ರದೇಶಗಳು ನಿವೇಶನಗಳಾಗಿ ಪರಿವರ್ತನೆಯಾಗಿರುವದು, ಭೂ ಪರಿವರ್ತನೆಯಾಗಿರುವದು ಸುಳ್ಳಲ್ಲ. ಇದರೊಂದಿಗೆ ಗದ್ದೆಗಳನ್ನು ಪಾಳು ಬಿಡಲು ಜಿಲ್ಲೆಯಲ್ಲಿ ಸಾಕಷ್ಟು ಕಾರಣಗಳನ್ನು ಈ ರೈತರು ಹೇಳುತ್ತಿದ್ದು, ಇದು ನಂಬುವಂತಹ ವಿಚಾರವೇ ಆಗಿದೆ.
ವಾತಾವರಣ ಏರು - ಪೇರು
ಕಾಡಾನೆ, ಕಾಡುಹಂದಿ, ಸೇರಿದಂತೆ ವನ್ಯ ಪ್ರಾಣಿಗಳ ಉಪಟಳ, ಕಾರ್ಮಿಕರ ಸಮಸ್ಯೆ, ಸೂಕ್ತ ಬೆಲೆ ಇಲ್ಲದೆ ನಷ್ಟ, ಭತ್ತದ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಸರಕಾರದಿಂದ ಸೂಕ್ತ ಸ್ಪಂದನ ಸಿಗದಿರುವದು ಒಂದು ಕಾರಣವಾಗಿದೆ. ಸರಕಾರ ಪ್ರಕಟಿಸುವ ಯೋಜನೆಗಳು ಯೋಜನೆಗಳಾಗಿಯೇ ಉಳಿಯುತ್ತಿವೆಯಲ್ಲದೆ ನೇರವಾಗಿ ರೈತರಿಗೆ ತಲಪುತ್ತಿಲ್ಲ ಎಂಬ ಆರೋಪವೂ ಇದೆ. ಇಲ್ಲಿನ ಭೌಗೋಳಿಕ ಪರಿಸ್ಥಿತಿಯೂ ವಿಭಿನ್ನವಾಗಿದೆ.
ಇನ್ನೂ ವರದಿ ಬಂದಿಲ್ಲ
ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡೇಗೌಡ ಅವರು ಸರಕಾರದ ಸೂಚನೆಯಂತೆ, ತಹಶೀಲ್ದಾರರು, ಕಂದಾಯ ಪರಿವೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಆದರೆ ಇನ್ನೂ ವರದಿ ಬಂದಿಲ್ಲ. ಜಿಲ್ಲೆಯಲ್ಲಿ ಈಗ ತಾನೇ ಕೃಷಿ ಚಟುವಟಿಕೆಗಳು ಆರಂಭ ಗೊಳ್ಳುತ್ತಿರುವದರಿಂದ ಕಾಲಾವಕಾಶ ಅಗತ್ಯವಿದೆ ಎಂದು ವಿವರ ನೀಡಿದ್ದಾರೆ. ಆದರೂ ಆದಷ್ಟು ಶೀಘ್ರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.