ಸಿದ್ದಾಪುರ, ಆ. 5: ಕರ್ತವ್ಯದಲ್ಲಿದ್ದ ನಸ್ರ್ಸ್ ಓರ್ವರು ಕಾವೇರಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಸಿದ್ದಾಪುರದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಸ್ರ್ಸ್ ರಶ್ಮಿ (35) ಎಂಬವರು ಶನಿವಾರದಂದು ಕರ್ತವ್ಯಕ್ಕೆ ಹಾಜರಾಗಿ ಬಳಿಕ ಕಾವೇರಿ ಸೇತುವೆ ಬಳಿ ತೆರಳಿದ್ದು, ಸೇತುವೆಯಿಂದ ನದಿಗೆ ಧುಮುಕಿದ್ದಾರೆ. ಅಂದಾಜು 50 ಅಡಿಗಳಷ್ಟು ಕೆಳಗೆ ಬಿದ್ದಿದ್ದು, ರಭಸದಿಂದ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವರು ದೃಶ್ಯವನ್ನು ನೋಡಿದ್ದು, ಸೇತುವೆಯ ಮೇಲೆ ನಿಂತು ಬೊಬ್ಬಿಟ್ಟರು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರ್ಮಿಕ ಲಿಜು ಎಂಬಾತ ನದಿಗೆ ಧುಮುಕಿದ್ದು, ಬಳಿಕ ನರ್ಸ್ ರಶ್ಮಿಯನ್ನು ರಕ್ಷಿಸಿದ್ದಾನೆ. ಇದೇ ಸಂದರ್ಭ ಸ್ಥಳದಲ್ಲಿದ್ದ ಆಟೋ ಚಾಲಕ ವರ್ಕಿ ಸೇರಿದಂತೆ ಇನ್ನಿತರರು ಸಹಕರಿಸಿದ್ದು, ಬಳಿಕ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ರಶ್ಮಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಯುವಕನ ಸಾಹಸ
ರಶ್ಮಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಸೇತುವೆಯ ಮೇಲೆ ಹಲವರು ನಿಂತು ನೋಡುತ್ತಿದ್ದರು. ಆದರೆ ಯಾರೂ ಕೂಡ ನದಿಗಿಳಿಯುವ ಸಾಹಸಕ್ಕೆ ಮುಂದಾಗಲಿಲ್ಲ. ಈ ಸಂದರ್ಭ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಮೂಲತಃ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ನಿವಾಸಿಯಾಗಿದ್ದು, ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಲಿಜು ವಿಚಾರ ತಿಳಿದು ತಾನು ಹಾಕಿದ್ದ ಬಟ್ಟೆಯಲ್ಲೇ ತನ್ನ ಪ್ರಾಣದ ಹಂಗನ್ನು ತೊರೆದು ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾನೆ. ಕೊಚ್ಚಿಹೋಗುತ್ತಿದ್ದ ರಶ್ಮಿಯನ್ನು ನದಿ ದಡಕ್ಕೆ ಎಳೆದು ತಂದು ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ. ತನ್ನ ಪ್ರಾಣದ ಹಂಗನ್ನು ತೊರೆದು ಮತ್ತೊಂದು ಜೀವವನ್ನು ಉಳಿಸಿದ ಲಿಜುವನ್ನು ಸಾರ್ವಜನಿPರು ಶ್ಲಾಘಿಸಿದರು.
-ವಾಸು