ಸೋಮವಾರಪೇಟೆ, ಆ. 5: ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿರುವ ವಿದ್ಯಾದೇಗುಲವನ್ನು ಅನಾಗರೀಕತೆ ಯಲ್ಲಿಯೇ ಇರುವ ಕೆಲ ದುರುಳರು ಆಶುಚಿತ್ವಗೊಳಿಸಿ ವಿಕೃತಿ ಮೆರೆದಿರುವ ಘಟನೆ ಸಮೀಪದ ಐಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಶಾಲೆಯ ಎಲ್ಲಾ ಕೊಠಡಿಗಳ ಬೀಗಕ್ಕೆ ಕೆಲವು ಕಿಡಿಗೇಡಿಗಳು ಫೆವಿಕಾಲ್ ಹಾಕಿದ್ದಲ್ಲದೇ, ಅಲ್ಲಲ್ಲಿ ಉಗಿದು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ತಮ್ಮ ವಿಕೃತಿಯನ್ನು ತೋರ್ಪಡಿಸಿದ್ದಾರೆ.

ನಿನ್ನೆ ದಿನ ಶಾಲೆಗೆ ರಜೆ ಇದ್ದು, ಶನಿವಾರ ಎಂದಿನಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ವಿಶೇಷ ತರಗತಿಯನ್ನು ತೆಗೆದುಕೊಳ್ಳುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೊಠಡಿಯ ಬಾಗಿಲಿಗೆ ಅಳವಡಿಸಿದ ಬೀಗವನ್ನು ತೆರೆಯಲು ಪ್ರಯತ್ನಿಸಿದ ಸಂದರ್ಭ ಫೆವಿಕಾಲ್ ಅಂಟಿಸಿರುವದು ಕಂಡುಬಂದಿದೆ. ಇದರೊಂದಿಗೆ ಶಾಲೆಯಲ್ಲಿ ಅಳವಡಿಸಿದ ಸೂಚನಾ ಫಲಕವನ್ನು ನಷ್ಟ ಪಡಿಸಿದ್ದು, ಕುಡಿಯುವ ನೀರಿನ ಸಂಪರ್ಕಕ್ಕೆ ಅಳವಡಿಸಲಾದ ಪೈಪ್ ಲೈನನ್ನು ತುಂಡರಿಸಲಾಗಿದೆ. ಶಾಲಾ ಶೌಚಾಲಯ ಮತ್ತು ಗೋಡೆಗಳಿಗೆ ಅಸಹ್ಯವಾಗಿ ಉಗಿದಿದ್ದು, ಶಾಲಾ ವಠಾರದಲ್ಲಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ.

ಈ ಹಿಂದೆಯೂ ಹಲವಾರು ಬಾರಿ ಕಿಡಿಗೇಡಿಗಳು ಶಾಲೆಗೆ ಸಂಬಂಧಿಸಿದ ಉಪಕರಣಗಳನ್ನು ನಾಶಪಡಿಸಿದ್ದಾರೆ. ಶಾಲೆಯ ಹೆಂಚುಗಳಿಗೆ ಕಲ್ಲುಗಳಿಂದ ಹೊಡೆದು ನಷ್ಟ ಪಡಿಸಿದ್ದಾರೆ. ಪ್ರಕರಣದ ಕುರಿತು ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಯಶ್ವಂತ್ ಕುಮಾರ್ ಪೋಲಿಸರಿಗೆ ದೂರು ನೀಡಿದ್ದು, ಸಹಾಯಕ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ, ಉಪಾಧ್ಯಕ್ಷೆÀ್ಷ ಶೋಭ, ಸದಸ್ಯ ಕೆ.ಪಿ.ದಿನೇಶ್,ಶಾಲಾ ಅಭಿವೃದ್ದಿ ಮಂಡಳಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಾಲೆಗಳು ದೇವಾಲಯ ಇದ್ದಂತೆ. ಇಲ್ಲಿ ಕುಕೃತ್ಯ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿ ಸಿ.ಸಿ.ಟಿ.ವಿಯನ್ನು ಅಳವಡಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಆವರಣ ಗೋಡೆ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಗ್ರಾ.ಪಂ. ಸದಸ್ಯ ದಿನೇಶ್ ತಿಳಿಸಿದ್ದಾರೆ.