ವೀರಾಜಪೇಟೆ, ಆ. 5: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕತ್ತಿ ಮಸೆಯುವ ಕಸರತ್ತು ಆರಂಭಗೊಂಡು ವರ್ಷಗಳೇ ಕಳೆದಿವೆ. ಯಾವದೇ ವಿರೋಧ ಪಕ್ಷದವರು ಆರೋಪ ಮಾಡುವದು ಸಹಜ. ಆದರೆ ಇಲ್ಲಿ ಬಿಜೆಪಿಯಲ್ಲೇ ಬೋಪಯ್ಯ ಅವರ ವಿರುದ್ಧ ಹಲವರು ಟೊಂಕ ಕಟ್ಟಿ ನಿಂತಿದ್ದಾರೆ.ಹಾಗಾಗಿಯೇ ಮುಂದಿನ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಬೋಪಯ್ಯ ಅವರಿಗೆ ಸೀಟು ಸಿಗಬಾರದು, ಸಿಕ್ಕಿದರೂ ಗೆಲ್ಲಿಸಬಾರದು ಎಂಬ ಒಳ ಕೆಲಸಗಳು ಪಕ್ಷದವರಿಂದಲೇ ಒಳಗೊಳಗೇ ನಡೆಯುತ್ತಿವೆ.ಗೌಡ ಜನಾಂಗದ ಕೆ.ಜಿ. ಬೋಪಯ್ಯ ಅವರು ಕೊಡವರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಪಕ್ಷದ ಹಲವರು ಹಲವು ಪ್ರಕರಣಗಳನ್ನು ಮುಂದಿಟ್ಟರು. ದೇವಟಿಪರಂಬು ವಿಷಯದಲ್ಲಿ ಬೋಪಯ್ಯ ಪಕ್ಷಪಾತ ಮಾಡಿದರು. ಕೊಡವ ಜಾಗಕ್ಕೆ ಸಂಬಂಧಿಸಿದಂತೆ
(ಮೊದಲ ಪುಟದಿಂದ) ಬೋಪಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಅಸಮಾಧಾನವೂ ಹಲವರಿಗಿತ್ತು.
ಇಂತಹ ಆರೋಪ ಮಾಡುತ್ತಿರುವದನ್ನು ನೇರವಾಗಿ ಕೇಳಿದ ಜಿಲ್ಲಾ ಪಂಚಾಯತ್ ಮಾಜೀ ಸದಸ್ಯೆ ಕಾಂತಿ ಸುರೇಶ್ ಅವರು ಈ ಬಗ್ಗೆ ವಿರೋಧಿಗಳೊಂದಿಗೆ ಮಾತುಕತೆ ನಡೆಸಿದರು.
ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬೋಪಯ್ಯ ಅವರೊಂದಿಗೆ ನೇರ ಚರ್ಚೆ ಮಾಡುವ ಬಗ್ಗೆ ಮನವೊಲಿಸಿ ತನ್ನ ಮನೆಯಲ್ಲೇ ಸಭೆ ಏರ್ಪಡಿಸಿದರು.
ಬೋಪಯ್ಯ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದ ಬಿಜೆಪಿ ಮಾಜೀ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಎಂ.ಬಿ. ದೇವಯ್ಯ ಹಾಗೂ ಇತರರೂ ಸಭೆಯಲ್ಲಿ ಪಾಲ್ಗೊಂಡರು. ಸುಮಾರು 35 ಮಂದಿ ಪಾಲ್ಗೊಂಡಿದ್ದ ‘‘ಸಮಾಧಾನ ಸಭೆ’’ಯಲ್ಲಿ ಆರಂಭದಲ್ಲಿ ಬಿಸಿ, ಏರಿದ ಧ್ವನಿ, ಆರೋಪಗಳೆಲ್ಲವೂ ನೇರವಾಗಿ ಬೋಪಯ್ಯ ಅವರ ಎದುರಲ್ಲೇ ಕಂಡುಬಂದವು.
ಅಂತಿಮವಾಗಿ ಪ್ರತಿಯೊಂದು ಅಂಶಗಳಿಗೂ ಸಮಜಾಯಿಷಿಕೆ ನೀಡಿದ ಬೋಪಯ್ಯ, ತಾವು ಎಂದೂ ಯಾವ ಜನಾಂಗದ ವಿರೋಧಿ ಯಾಗಿಲ್ಲ ಎಂದು ಪ್ರತಿಪಾದಿಸಿದರು. ತನ್ನ ತೇಜೋವಧೆ ಯತ್ನಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಸ್ಪರ್ಧಿಸಲು ಟಿಕೆಟ್ ಪಡೆದು ಬಂದರೂ ತಾನು ಪೂರ್ಣ ಪ್ರಮಾಣದಲ್ಲಿ ಸಹಕರಿಸುವದಾಗಿ ಭರವಸೆ ನೀಡಿದರು. ಭಿನ್ನಾಭಿಪ್ರಾಯ ಗಳಿಂದ ಪಕ್ಷದ ಬೆಳವಣಿಗೆಗೇ ತೊಂದರೆ ಎಂದು ಮನವರಿಕೆ ಮಾಡಿದರು.
ಮೊನ್ನೆಯ ಸಭೆಯ ಬಳಿಕ ಬಿಜೆಪಿಯೊಳಗಿನ ಅಸಮಾಧಾನದ ಪ್ರಮಾಣ ಸ್ವಲ್ಪ ಮಟ್ಟದಲ್ಲಿ ಕಡಿಮೆಯಾದಂತಾಗಿದ್ದರೂ, ಮುಂದಿನ ಬೆಳವಣಿಗೆ ಬಗ್ಗೆ ಹಲವರು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.