*ಸಿದ್ದಾಪುರ, ಆ. 4 : ಅಭ್ಯತ್‍ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ 2 ದಿನವಾದರೂ ವೈದÀ್ಯರು ಭೇಟಿ ನೀಡಿ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕೆಂದು ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಆಗ್ರಹ ಕೇಳಿಬಂದಿತು. ಅಭ್ಯತ್‍ಮಂಗಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇದೀಗ ಡೆಂಗ್ಯೂ, ಚಿಕುನ್‍ಗುನ್ಯಾ ಖಾಯಿಲೆ ಹರಡುತ್ತಿದೆ. ವಾರಕ್ಕೆ 2 ದಿನ ವೈದÀ್ಯರನ್ನು ಆಸ್ಪತ್ರೆಗೆ ಬರುವಂತೆ ಜಿ.ಪಂ. ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ನಿರ್ಣಯ ಕೈಗೊಂಡು ಪತ್ರ ಬರೆಯುವಂತೆ ಸದಸ್ಯ ಸುಧಿ ಆಗ್ರಹಿಸಿದರು.

ವಾಲ್ನೂರು ತ್ಯಾಗತ್ತೂರು ಗ್ರಾ.ಪಂ.ನ ಸಾಮಾನ್ಯ ಸಭೆ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆಯಿತು.

ನೀರುಗಂಟಿ ವಜಾಕ್ಕೆ ಆಗ್ರಹ: ಗ್ರಾಮ ಪಂಚಾಯಿತಿಯ ನೀರು ಸಬರಾಜು ಕೆಲಸಕ್ಕೆ ನಿಯುಕ್ತನಾದ ಅನಿಲ್ ಎಂಬಾತ ತನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ನೀರಿನ ಟ್ಯಾಂಕ್‍ನಲ್ಲಿ ಗಿಡಗಂಟಿಗಳು ತುಂಬಿರುವದನ್ನು ಕಡಿದು ಹಾಕಲು ಆದೇಶಿಸಿದರೂ ಅದನ್ನು ಮಾಡಲಿಲ್ಲ ಈ ಬಗ್ಗೆ ಪ್ರಶ್ನಿಸಿದಾಗ ಆತ ತನ್ನ ತಾಯಿ ಮತ್ತು ಅತ್ತೆ ಜೊತೆ ಸೇರಿಕೊಂಡು ನಿಂದಿಸಿಲ್ಲದೆ ಬೆದರಿಕೆ ಹಾಕಿದ್ದಾನೆ. ಆತನನ್ನು ಕೆಲಸದಿಂದ ವಜಾ ಮಾಡುವ ನಿರ್ಣಯ ಕೈಗೊಳ್ಳಬೇಕೆಂದು ಅಧ್ಯಕ್ಷರು ಸಭೆಯಲ್ಲಿ ಆಗ್ರಹಿಸಿದರು.

ಆ ಸಂದರ್ಭ ಸಭೆಗೆ ನೀರುಗಂಟಿ ಅನಿಲ್‍ರನ್ನು ಕರೆಯಿಸಿದ್ದು, ಸದಸ್ಯ ಅಂಚೆಮನೆ ಸುಧಿ ಅಧ್ಯಕ್ಷರು ಪಂಚಾಯಿತಿಯ ಪ್ರಥಮ ಪ್ರಜೆ, ಅವರಿಗೆ ಗೌರವ ಕೊಡಬೇಕು. ಅವರು ಹೇಳಿದ ಕೆಲಸ ಮಾಡಬೇಕೆಂದು ಹೇಳಿದರು.

ಸದಸ್ಯ ಭುವೇಂದ್ರ ಮಾತನಾಡಿ, ಅಧ್ಯಕ್ಷರು ಹಾಗೂ ವಾಟರ್‍ಮೆನ್ ಅನಿಲ್ ಸಂಬಂಧಿಯಾಗಿದ್ದು ಅವರ ಕುಟುಂಬದ ವಿಷಯ ಸಭೆಯಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಸಮಜಾಯಿಷಿಕೆ ನೀಡಿದರು.

ಅಧ್ಯಕ್ಷರು ಮತ್ತೆ ಪಟ್ಟು ಹಿಡಿದಾಗ ಸದಸ್ಯರುಗಳು ಒಂದಾಗಿ ನೀರುಗಂಟಿ ಅನಿಲ್ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಬಗ್ಗೆ ಊರಿನವರಿಂದ ಯಾವದೇ ಪುಕಾರು ಬಂದಿಲ್ಲ. ಆದುದರಿಂದ ವಜಾಗೊಳಿಸುವದು ಸರಿಯಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.