ಸೋಮವಾರಪೇಟೆ, ಆ. 5: ಕೊಡಗಿನ ಜಾನಪದ ಸಂಸ್ಕøತಿ, ಆಚಾರ, ವಿಚಾರ, ಕಲೆ, ಕಲಾವಿದರ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಸಮಗ್ರ ಜಾನಪದ ಕೋಶವನ್ನು ಹೊರತರಲು ಕೊಡಗು ಜಿಲ್ಲಾ ಜಾನಪದ ಪರಿಷತ್ ಚಿಂತನೆ ನಡೆಸಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದರು.ಸೋಮವಾರಪೇಟೆ ಹೋಬಳಿ ಜಾನಪದ ಪರಿಷತ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಾಹಿತ್ಯ ಘಟಕದ ಆಶ್ರಯದಲ್ಲಿ ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಕವಿಗೋಷ್ಠಿ, ಜಾನಪದ ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಂಪತ್ತು ಉಳಿಯಬೇಕು. ಯಾಂತ್ರೀಕೃತ ಬದುಕಿನಲ್ಲಿ ಸಂಬಂಧಗಳು ಕೇವಲ ಮುಖಸ್ತುತಿಗೆ ಮಾತ್ರ ಮೀಸಲಾಗುತ್ತಿದ್ದು, ಇದು ಬದಲಾಗಿ ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಿರುವ ಜನಪದೀಯ ಬದುಕು ಎಲ್ಲೆಡೆಗೂ ವಿಸ್ತರಿಸಬೇಕು.

(ಮೊದಲ ಪುಟದಿಂದ) ಊರಿನ ಹಬ್ಬ ಹರಿದಿನ, ಜಾತ್ರಾ ಮಹೋತ್ಸವಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಅನಂತಶಯನ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಜನಪದೀಯ ವಿಚಾರಗಳು, ಶ್ರೀಮಂತಿಗಳ ಬಗ್ಗೆ ಸಂಶೋಧನೆಯಾಗಬೇಕು. ಈ ನಿಟ್ಟಿನಲ್ಲಿ ಪರಿಷತ್ ವತಿಯಿಂದ ಸಮಗ್ರ ಮಾಹಿತಿ ಕೋಶ ಹೊರತರಲು ಚಿಂತಿಸಲಾಗಿದ್ದು, ಅದೊಂದು ದಾಖಲೆಯಾಗಿ ಉಳಿಯಲಿದೆ. ಈ ನಿಟ್ಟಿನಲ್ಲಿ ಆಸಕ್ತಿಯಿರುವವರು ಮುಂದೆ ಬಂದರೆ ಪರಿಷತ್ ವತಿಯಿಂದ ಆರ್ಥಿಕ ಸಹಾಯವನ್ನೂ ಮಾಡಲಾಗುವದು ಎಂದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಅರಸೀಕೆರೆ ಹಾರನಹಳ್ಳಿ ಜೆ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಪಿ. ಸರ್ವಜ್ಞಮೂರ್ತಿ ಮಾತನಾಡಿ, ಜನಪದವು ತನ್ನ ಮೂಲ ಸತ್ವವನ್ನು ಉಳಿಸಿಕೊಳ್ಳುವದರ ಜತೆಗೆ ವರ್ತಮಾನದ ವಿಷಯಗಳನ್ನು ತಳುಕು ಹಾಕಿಕೊಂಡು ಬೆಳೆದು ವಿಕಾಸವಾಗಿದೆ. 1855ರಷ್ಟು ಹಿಂದೆಯೇ ರೆವರೆಂಡ್ ಡಾ.ಮೋಗ್ಲಿಂಗ್ ಕೆಲವು ಜನಪದ ಹಾಡುಗಳನ್ನು ಸಂಗ್ರಹಿಸಿದ್ದರು. ನಂತರ ಹಲವು ಯೂರೋಪಿಯನ್ ವಿದ್ವಾಂಸರು ಜನಪದ ಸಂಗ್ರಹ ಹಾಗೂ ವಿಶ್ಲೇಷಣೆ ಮಾಡಿದ್ದರು. 1924 ರಲ್ಲಿ ನಡಿಕೇರಿಯಂಡ ಚಿನ್ನ್ನಪ್ಪನವರು ಕೊಡವ ಜನಪದ ಸಾಹಿತ್ಯವನ್ನು ತಮ್ಮ ‘ಪಟ್ಟೋಲೆ ಪಳಮೆ’ ಪುಸ್ತಕದಲ್ಲಿ ಪರಿಚಯಿಸಿದ್ದರು ಎಂದರು.

ಕವಿಗಳ ಮಾತು ಹೂ ಗಳಂತೆ, ಅಂತಹ ಹೂಗಳನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಈ ಮಣ್ಣಿನ ಸಾಹಿತ್ಯ ಕೊನೆತನಕ ಉಳಿಯುತ್ತದೆ. ದೇಶದ ಶ್ರೀಮಂತ ಸಂಸ್ಕøತಿ ಜಾನಪದ ಕಲೆಯಲ್ಲಿದೆ. ಜಾನಪದ ಹಾಗು ಸಾಹಿತ್ಯದ ಅಧ್ಯಯನ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾಡಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ,ಜಾನಪದ ಕಲೆಗಳ ಉಳಿವು ಅನಿವಾರ್ಯವಾಗಿದ್ದು, ಇಂದಿನ ದಿನಗಳಲ್ಲಿ ನಗರ ಪ್ರದೇಶದ ಮಕ್ಕಳಿಗೆ ಭತ್ತವನ್ನು ಹೇಗೆ ಬೆಳೆಯುತ್ತಾರೆ ಎಂಬವದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪದ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ.ಮುರುಳೀಧರ್ ವಹಿಸಿದ್ದರು. ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ.ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಉಪಸ್ಥಿತರಿದ್ದರು.

ಜಾನಪದ ಪರಿಷತ್‍ನ ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್ ಕಾರ್ಯಕ್ರಮ ನಿರ್ವಹಿಸಿ, ಹೋಬಳಿ ಘಟಕದ ಕಾರ್ಯದರ್ಶಿ ಎಂ.ಎ. ರುಬೀನ ಸ್ವಾಗತಿಸಿ, ವಂದಿಸಿದರು. ಬಳಿಕ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ಇದೇ ಸಂದರ್ಭ ಸಿಂಗನಳ್ಳಿಯ ಸುಗ್ಗಿ ಕುಣಿತದ ತಂಡದ ಕಲಾವಿದ ಎಸ್.ಪಿ.ಕುಟ್ಟಪ್ಪ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತಶಯನ, ಉಪನ್ಯಾಸಕ ಸರ್ವಜ್ಞ ಮೂರ್ತಿ ಅವರುಗಳನ್ನು ಸನ್ಮಾನಿಸಲಾಯಿತು. ನಂತರ ಸೋಮವಾರಪೇಟೆ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕವನವಾಚನ, ಸಾರ್ವಜನಿಕ ವಿಭಾಗದಲ್ಲಿ ಜಾನಪದ ಗೀತೆ ಗಾಯನ ಸ್ಪರ್ಧೆಗಳು ನಡೆದವು.