ಮಡಿಕೇರಿ, ಆ. 5: ವಾಟ್ಸ್‍ಆ್ಯಪ್‍ನಲ್ಲಿ ರಾತ್ರಿ ಫೋನ್ ಬಂದಾಗ ಆಶ್ಚರ್ಯವಾಯಿತು. ‘‘ನಾನಪ್ಪ..., ನಾಣಯ್ಯ. ಇಂಟರ್‍ನೆಟ್ ಮೂಲಕ ಇಂದಿನ ‘ಶಕ್ತಿ’ಯನ್ನ ಓದಿದೆ. ಅದಕ್ಕಾಗಿ ಫೋನ್ ಮಾಡಿದೆ’’ ಎಂದರು ಮಾಜೀ ಸಚಿವ ಯಂ.ಸಿ. ನಾಣಯ್ಯ.ನಗರಸಭೆ ಎಲ್ಲೆಡೆ ತಾತ್ಕಾಲಿಕ ಪರವಾನಗಿ ಮೂಲಕ ವ್ಯಾಪಾರ ವಹಿವಾಟಿಗೆ ಅವಕಾಶ ಕೊಟ್ಟಿರುವ ವರದಿ ಪ್ರಕಟಗೊಂಡಿದ್ದನ್ನು ಪ್ರಸ್ತಾಪಿಸಿದ ಶ್ರೀಯುತರು, ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ನಗರಸಭೆ ಕ್ರಮಕೈಗೊಂಡಿದ್ದು, ಜನತೆಗೆ ಈ ಬಗ್ಗೆ ಆಡಳಿತ ನಡೆಸುವವರು ಸ್ಪಷ್ಟೀಕರಣ ನೀಡಬೇಕು ಎಂದರು. ನಗರಸಭೆಗೂ ಇದರಿಂದ ನಷ್ಟ ಉಂಟಾಗಿದ್ದು, ಸಂಬಂಧಿತ ವ್ಯಾಪಾರಸ್ಥರು ಹಾಗೂ ನಗರಸಭೆಯ ಸಂಬಂಧಿತ ಅಧಿಕಾರಿಗಳಿಂದ ಮೊತ್ತ ವಸೂಲಾತಿ ಮಾಡಬೇಕೆಂದು ನಾಣಯ್ಯ ಅವರು ಆಗ್ರಹಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆಯೂ ಹಲವೆಡೆ ನಗರಸಭೆ ವ್ಯಾಪಾರಕ್ಕೆ ಅನುಮತಿ ನೀಡಿದೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತೆರವಿಗೆ ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದರು. ತಾ.9ರಂದು ತಾವು ಮಡಿಕೇರಿಗೆ ಆಗಮಿಸಲಿದ್ದು, ಈ ಪ್ರಕರಣದ ಬಗ್ಗೆ ಸರಕಾರದ ಗಮನ ಸೆಳೆಯುವದಾಗಿ ವಿವರಿಸಿದರು.

-ಸಂಪಾದಕ.