ಸೋಮವಾರಪೇಟೆ, ಆ. 5: ಸುಂದರ ಪಟ್ಟಣ, ಸ್ವಚ್ಛ ಪಟ್ಟಣ, ಪ್ಲಾಸ್ಟಿಕ್ ಮುಕ್ತ ಪಟ್ಟಣ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುತ್ತಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಕಸ ವಿಲೇವಾರಿ ಸಮಸ್ಯೆ ಪೆಡಂಭೂತದಂತೆ ಎರಗಿದೆ. ಪಂಚಾಯಿತಿಯ ವತಿಯಿಂದ ನಿವೇಶನ ಖರೀದಿಸಲಾಗಿದ್ದರೂ, ಆ ಸ್ಥಳದಲ್ಲಿ ಕಸ ವಿಲೇವಾರಿಗೆ ಸ್ಥಳೀಯರು ಅಡ್ಡಿಪಡಿಸುತ್ತಿ ರುವದರಿಂದ ಪಟ್ಟಣದ ಸಾರ್ವಜನಿಕ ಪ್ರದೇಶ, ಪಾಳುಬಿದ್ದಿರುವ ಜಾಗಗಳು ಕಸದ ಕೊಂಪೆಯಾಗುತ್ತಿದೆ.

ಕಳೆದ ಐದಾರು ತಿಂಗಳಿನಿಂದ ಪಟ್ಟಣ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಈ ಹಿಂದೆ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ದಂಚಿನಲ್ಲಿ ಕಸ ಸುರಿಯಲಾಗುತ್ತಿತ್ತು. ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಿ ವಾಹನಗಳು ತೆರಳದಂತೆ ತಡೆಯೊಡ್ಡಿದ ನಂತರ ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ಖರೀದಿಸಿ ಅದರ ಸುತ್ತಲೂ ಆವರಣ ಗೋಡೆ ನಿರ್ಮಿಸಿ ಕಸ ಸುರಿಯಲು ಮುಂದಾಗುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಕಾರ್ಯವೂ ಸ್ಥಗಿತಗೊಂಡಿತ್ತು.

ಇದಾದ ನಂತರ ಕರ್ಕಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಜಾಗದಲ್ಲಿ ತ್ಯಾಜ್ಯ ಸುರಿಯಲಾಗುತ್ತಿತ್ತು. ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಗಬ್ಬುನಾರುತ್ತಿದೆ ಎಂದು ಸ್ಥಳೀಯರು ಆರೋಪಿಸಿ ನಿಮ್ಮ ಪ.ಪಂ. ವ್ಯಾಪ್ತಿಯ ಕಸವನ್ನು ನಮ್ಮ ಗ್ರಾಮಕ್ಕೆ ತರಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಜಾಗದ ಮಾಲೀಕರು ಕಸ ಹಾಕಲು ಒಪ್ಪಿಗೆ ನೀಡಿದ್ದರೂ ಸಹ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಅಲ್ಲಿಂದಲೂ ಪಂಚಾಯಿತಿ ಹಿಂದೆ ಸರಿಯ ಬೇಕಾಯಿತು. ಈ ಮಧ್ಯೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕಸ ಸಂಗ್ರಹಣೆಗೆ ತೊಟ್ಟಿಗಳನ್ನು ನೀಡಿ ಹಸಿ ಮತ್ತು ಒಣಕಸಗಳನ್ನು ವಿಂಗಡಿಸಿ ಇಡುವಂತೆ ಸೂಚಿಸಲಾಯಿತು. ಪಂಚಾಯಿತಿ ನೀಡಿದ ತೊಟ್ಟಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದರೂ ಸಹ ಪಂಚಾಯಿ ತಿಯ ವಾಹನ ಆಗಮಿಸದ ಹಿನ್ನೆಲೆ ಮನೆಯೊಳಗೆ ಕಸ ಕೊಳೆತು ಕ್ರಿಮಿ ಕೀಟಗಳು ಹುಟ್ಟಿಕೊಳ್ಳಲು ಕಾರಣ ವಾಯಿತು. ಪಟ್ಟಣದ ಸಾರ್ವಜನಿಕ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಪಂಚಾಯಿತಿ ಕೆಲಸಗಾರರು ವಿಲೇವಾರಿ ಮಾಡುತ್ತಿದ್ದರೆ, ಮನೆಗಳಲ್ಲಿನ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಸ್ಥಳಾವಕಾಶದ ಕೊರತೆ ಎದುರಾದ ಹಿನ್ನೆಲೆ ಕಸ ಸಂಗ್ರಹಣೆಗೆ ಮುಂದಾಗಲಿಲ್ಲ.

ಪರಿಣಾಮ ಮನೆ, ಅಂಗಡಿಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸಾರ್ವಜನಿಕರು ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದು, ಅಲ್ಲಲ್ಲಿ ಕಸದ ಕೊಂಪೆ ಜನ್ಮತಾಳುತ್ತಿದೆ. ಮಳೆ-ಬಿಸಿಲಿಗೆ ತ್ಯಾಜ್ಯಗಳು ಕೊಳೆಯ ಲಾರಂಭಿಸಿದ್ದು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಸಾಂಕ್ರಾಮಿಕ ರೋಗ ಗಳನ್ನು ಹರಡುವ ಕಾರ್ಖಾನೆ ಗಳಾಗುತ್ತಿವೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮೇಲಿನ ಪೆಟ್ರೋಲ್ ಬಂಕ್ ಮುಂಭಾಗದ ಕೂರ್ಗ್ ಬಾರ್ ಪಕ್ಕದ ಖಾಲಿ ನಿವೇಶನ, ತ್ಯಾಗರಾಜ ರಸ್ತೆಯಿಂದ ಮಡಿಕೇರಿ ರಸ್ತೆ ಸಂಪರ್ಕಿಸುವ ಸುರಬಿ ಹೊಟೇಲ್‍ನ ಗಲ್ಲಿ, ತಾಲೂಕು ಕಚೇರಿಯ ಹಿಂಭಾಗ, ಗ್ರಂಥಾಲಯದ ಸನಿಹದಲ್ಲಿ ಕಸಗಳನ್ನು ಹಾಕಲಾಗುತ್ತಿದ್ದು, ಈ ಪ್ರದೇಶಗಳು ತ್ಯಾಜ್ಯಮಯವಾಗುತ್ತಿವೆ.

ಕಸದ ಸಮಸ್ಯೆ ಪೆಡಂಭೂತದಂತೆ ಪಟ್ಟಣ ಪಂಚಾಯಿತಿಯನ್ನು ಕಾಡುತ್ತಿದ್ದರೂ ಸಹ ಒಗ್ಗಟ್ಟಿನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕಾದ ಆಡಳಿತ ಮಂಡಳಿ ಸದಸ್ಯರುಗಳು ತಮ್ಮತಮ್ಮಲ್ಲೇ ಕಿತ್ತಾಟದಲ್ಲಿ ತೊಡಗಿದ್ದಾರೆ. ಕಳೆದ ಸಾಮಾನ್ಯ ಸಭೆಯಲ್ಲೂ ರಂಪಾಟ ನಡೆದ ವಿದ್ಯಮಾನ ಘಟಿಸಿದ್ದು, ಆ ನಂತರದ ದಿನಗಳಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಮಕ್ಷಮದ ಸಭೆಯಲ್ಲೂ ಯಾವದೇ ಗಟ್ಟಿ ತಿರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರು ಕಸದ ವಿಚಾರದಲ್ಲಿ ಕಿತ್ತಾಟ ನಡೆಸುತ್ತಿದ್ದಾರೆಯೇ ಹೊರತು ಬದ್ಧತೆಯಿಂದ ಯಾವದೇ ತೀರ್ಮಾನ ಕೈಗೊಳ್ಳುತ್ತಿಲ್ಲ. ಕಸ ಸಮಸ್ಯೆ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಬಳಿ ತೆರಳಲು ನಿರ್ಧರಿಸಲಾಗಿದ್ದರೂ ಕೆಲ ಸದಸ್ಯರು ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ. ಕಸದ ಸಮಸ್ಯೆಯನ್ನು ಜೀವಂತ ವಿಟ್ಟುಕೊಂಡು ಅಧ್ಯಕ್ಷೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷದ ಸದಸ್ಯರೊಂದಿಗೆ ಕೆಲ ಆಡಳಿತ ಪಕ್ಷದ ಸದಸ್ಯರೂ ಮುಂದಾಗಿದ್ದಾರೆ. ಇದರಿಂದಾಗಿಯೇ ಸಮಸ್ಯೆ ಪರಿಹಾರ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ. ಪಂಚಾಯಿತಿ ಯಿಂದ ಸಿದ್ದಲಿಂಗಪುರದಲ್ಲಿ ಖರೀದಿಸಿರುವ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಗಟ್ಟಿ ತೀರ್ಮಾನ ಕೈಗೊಳ್ಳಬೇಕು. ಅದು ಸಾಧ್ಯವಿಲ್ಲ ವಾದರೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಪೈಸಾರಿ ಅಥವಾ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನದಲ್ಲಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸ ಬೇಕು. ಪಂಚಾಯಿತಿ ವತಿಯಿಂದ ಕೋಟಿಗಟ್ಟಲೆ ವೆಚ್ಚದಲ್ಲಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವದಕ್ಕೂ ಮೊದಲು ದೂರದೃಷ್ಟಿತ್ವದ ಚಿಂತನೆಯೊಂದಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಮುಂದಾಗ ಬೇಕೆಂದು ಸಾರ್ವಜನಿಕರು ಪತ್ರಿಕೆಯೊಂದಿಗೆ ಒತ್ತಾಯಿಸಿದ್ದಾರೆ.

ಪಂಚಾಯಿತಿಯ ಒಳಗೆ ಕಾಲೆಳೆಯುವ ರಾಜಕೀಯ ಬಿಟ್ಟು, ಸಾರ್ವಜನಿಕರ ಆರೋಗ್ಯ, ಪರಿಸರ ಸ್ವಚ್ಛತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸದಸ್ಯರುಗಳು ಒಂದಾದರೆ ಮಾತ್ರ ಕಸದ ಭೂತವನ್ನು ಓಡಿಸಬಹುದು. ತಪ್ಪಿದಲ್ಲಿ ಅದು ಪಂಚಾಯಿತಿ ಸದಸ್ಯರುಗಳು ಮಾತ್ರವಲ್ಲ, ಇಡೀ ಪಟ್ಟಣವನ್ನು ಬಾಧಿಸಲಿದೆ.

- ವಿಜಯ್ ಹಾನಗಲ್