ಮಡಿಕೇರಿ, ಆ. 5: ಸ್ವಾತಂತ್ರ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಬಳಕೆಗೆ ಅವಕಾಶ ನೀಡಬಾರದು ಮತ್ತು ಧ್ವಜಕ್ಕೆ ಅಪಮಾನವಾಗದಂತೆ ಜನರಲ್ಲಿ ಅರಿವು ಮೂಡಿಸಬೇಕೆಂದು ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದೇಶಪ್ರೇಮವನ್ನು ಮೆರೆಯುವ ಆತುರದಲ್ಲಿ ತ್ರಿವರ್ಣ ಧ್ವಜವನ್ನು ಬಳಸುವ ಅನೇಕರು ರಾಷ್ಟ್ರೀಯ ಹಬ್ಬ ಆಚರಣೆಯಾದ ನಂತರ ರಸ್ತೆ, ಚರಂಡಿಗಳ ಬದಿ ಧ್ವಜವನ್ನು ಬಿಸಾಕಿ ಅವಮಾನಿಸುತ್ತಿರುವ ಬೆಳವಣಿಗೆಗಳು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳಿಂದ ಹೆಚ್ಚು ಅಪಮಾನವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ವ್ಯಾಪಕವಾಗಿ ಆಗಬೇಕಾಗಿದೆ.
ಶಾಲಾ, ಕಾಲೇಜುಗಳಲ್ಲಿ ರಾಷ್ಟ್ರೀಯ ಹಬ್ಬದ ಸಂಭ್ರಮದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಆಗಬಹುದಾದ ಅಗೌರವ ಅಥವಾ ಅಚಾತುರ್ಯವನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳಿಗೆ ನಿಯಮ ಪಾಲನೆಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಜಾಗೃತಿ ಸಮಿತಿ ಮನವಿ ಮಾಡಿದೆ.
ಪ್ಲಾಸ್ಟಿಕ್ ಧ್ವಜಗಳ ತಯಾರಿಕೆ ಮತ್ತು ಬಳಕೆಯನ್ನು ಸಂಪೂರ್ಣ ವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಹಿಂದೂ ಜನ ಜಾಗೃತಿ ಸಮಿತಿಯ ಪ್ರಮುಖರಾದ ಪಾರ್ವತಿ ಗಣಪತಿ, ಶಿವರಾಂ ಮತ್ತಿತರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೂಡ ಮನವಿ ಪತ್ರ ಸಲ್ಲಿಸಿದರು.