ಕೂಡಿಗೆ, ಆ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯವು ಜುಲೈ ಅಂತ್ಯದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಯಾಗಿದ್ದರೂ, ರೈತರ ಬೆಳೆಗೆ ನಾಲೆಯಲ್ಲಿ ಹರಿಯಬೇಕಾದ ನೀರು ಹರಿಸದೆ, ನಾಲೆಗಳು ನೀರಿಲ್ಲದೆ ಬಣಗುಡುತ್ತಿವೆ. ಹಾರಂಗಿ ನದಿ ನೀರನ್ನು ಆಶ್ರಯಿಸಿ ಬೆಳೆ ಮಾಡುವ ಜಲಾನಯನ ಪ್ರದೇಶದ ಹಾಗೂ ಜಿಲ್ಲೆಯ ಗಡಿಭಾಗದ ರೈತರು ಬೆಳೆ ಬೆಳೆಯಲು ನೀರಿಲ್ಲದೆ, ನಾಲೆಯಲ್ಲಿ ನೀರು ಹರಿಸುವದನ್ನೇ ಎದುರು ನೋಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ವರ್ಷಂಪ್ರತಿಯಂತೆ ಈ ಸಾಲಿನಲ್ಲಿ ಹಾರಂಗಿ ನದಿ ತುಂಬಿ ನಾಲೆಗಳಿಗೆ ನೀರು ಹರಿಸುತ್ತಾರೆ ಎಂದು ರೈತರು ಬಿತ್ತನೆ ಭತ್ತದ ಸಸಿ ಮಡಿಗಳನ್ನು ತಯಾರಿಸಿ ಕೊಂಡಿದ್ದರೂ, ನಾಲೆಯಲ್ಲಿ ನೀರು ಹರಿಸದೇ ನಾಟಿ ಕಾರ್ಯ ನಡೆಯದೆ ಸಸಿಗಳು ಒಣಗುತ್ತಿವೆ.
ಸರ್ಕಾರದ ಆದೇಶದಂತೆ ಈಗಾಗಲೇ ನದಿಗೆ 9934 ಕ್ಯೂಸೆಕ್ ನೀರನ್ನು
(ಮೊದಲ ಪುಟದಿಂದ) ಹರಿಸಲಾಗುತ್ತಿದ್ದು, ನದಿಯೂ ಕಾವೇರಿ ಹಾಗೂ ಹಾರಂಗಿ ನದಿ ಕೂಡುವ ಕೂಡಿಗೆ ಸಂಗಮ ಸ್ಥಳದವರೆಗೂ ನದಿ ತುಂಬಿ ಹರಿಯುತ್ತಿದೆ. ಆದರೆ, ಹಾರಂಗಿ ಜಲಾಶಯ ಭರ್ತಿಯಾಗಿ 15 ದಿನಗಳೇ ಕಳೆದಿದ್ದರೂ ಇದುವರೆಗೂ ನಾಲೆಗೆ ನೀರು ಹರಿಸದಿರುವದು ರೈತರನ್ನು ಸಂಕಷ್ಟಕ್ಕೆ ತಂದೊಡ್ಡಿದೆ.
ಸೋರಿಕೆಯ ನೀರಿನಲ್ಲಿ ನಾಟಿ
ಇದುವರೆಗೂ ನಾಲೆಗಳಲ್ಲಿ ನೀರು ಹರಿಯದಿರುವದರಿಂದ ಗದ್ದೆಯಲ್ಲಿ ಬಿತ್ತನೆ ಮಾಡಿದ ಭತ್ತದ ಸಸಿ ಮಡಿಗಳನ್ನು ನದಿಯಿಂದ ಬರುತ್ತಿರುವ ಸೋರಿಕೆ ನೀರಿನಿಂದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಹಾರಂಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಯದಿದ್ದರೂ, ಸೋರಿಕೆಯ ನೀರು ಈಗಾಗಲೇ 10 ಕ್ಯೂಸೆಕ್‍ನಷ್ಟು ಬರುತ್ತಿರುವದರಿಂದ ಹಾರಂಗಿ ಅಣೆಕಟ್ಟೆಯ ಸಮೀಪದ ಪ್ರದೇಶಗಳಾದ ಹುದುಗೂರು, ಮದಲಾಪುರಗಳಲ್ಲಿ ನಾಟಿ ಕಾರ್ಯ ಚುರುಕುಗೊಳಿಸಲಾಗಿದೆ. ಆದರೆ, ಗಡಿಭಾಗದವರೆಗೆ ನೀರು ಹರಿಯದಿದ್ದಲ್ಲಿ ಭತ್ತದ ಮಡಿಗಳನ್ನು ಹಸುಗಳಿಗೆ ಮೇಯಿಸುವ ಪರಿಸ್ಥಿತಿ ಬಂದಿದೆ ಎಂದು ನೊಂದ ರೈತರು ತಿಳಿಸಿದ್ದಾರೆ.
ನಾಲೆಗಳಲ್ಲಿ ಸಾಲು ಸಾಲು ಮರಗಳು
ಜಲಾಶಯ ಭರ್ತಿಯಾದ ತಕ್ಷಣ ಕೊಡಗಿನ ಗಡಿಭಾಗದವರೆಗಾದರೂ ಇಲ್ಲಿಯತನಕ ರೈತರುಗಳಿಗೆ 2000 ಕ್ಯೂಸೆಕ್ ನೀರನ್ನಾದರೂ ಹರಿಸಿ, ಬೆಳೆಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ಆದರೆ, ಈ ಬಾರಿ ನೀರು ತುಂಬಿ ಹರಿಯಬೇಕಾದ ಮುಖ್ಯ ನಾಲೆಗಳಲ್ಲಿ ನೀರಿಲ್ಲದೆ, ನಾಲೆಯುದ್ದಕ್ಕು ನಾಲೆಗೆ ಬಾಗಿಕೊಂಡಂತಿದ್ದ ಗಾಳಿ ಮರಗಳು ಗಾಳಿಯ ರಭಸಕ್ಕೆ ನಾಲೆಗೆ ಉರುಳುಬಿದ್ದಿವೆ.