ಮಡಿಕೇರಿ, ಆ. 6: ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಅನುದಾನಿತ ಯೋಜನೆಯಾದ ಗ್ರಾಮೀಣ ಮಾರಾಟ ಮಳಿಗೆಗೆ ಚಾಲನೆ ದೊರೆಯಿತು.

ವೀರಾಜಪೇಟೆಯ ಚಿಕ್ಕಪೇಟೆ ಯಲ್ಲಿ ನಬಾರ್ಡ್ ವಿಶೇಷ ಯೋಜಯಡಿ ನಿರ್ಮಾಣ ಗೊಂಡಿರುವ ಗ್ರಾಮೀಣ ಮಾರಾಟ ಮಳಿಗೆಯ ಉದ್ಘಾಟನೆಯನ್ನು ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೊಡಗು ಜಿಲ್ಲೆಯು ಸಂಪದ್ಭರಿತವಾಗಿದ್ದು, ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಜಂಟಿ ಭಾದ್ಯತಾ ಗುಂಪುಗಳ ಮುಖಾಂತರ ಬ್ಯಾಂಕುಗಳಿಂದ ಆರ್ಥಿಕ ಸಹಕಾರ ಪಡೆದು ಗೃಹೋತ್ಪನ್ನ ಜೊತೆ, ವಿವಿಧ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡು, ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಹಂತ ಹಂತವಾಗಿ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಂಘಟಿತರಾಗಿ ತಾಲೂಕು ಸಾವಯವ ಕೃಷಿಕರ ಸಂಘ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ ಇದರ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿರುವದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಪ್ರಾಯೋಜಿತ ಹಲವು ಅದ್ಭುತ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳು ಪರಿಣಾಮಕಾರಿಯಾಗಿ ಯಶಸ್ಸನ್ನು ಕಾಣಬೇಕಾದರೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಬ್ಯಾಂಕುಗಳಿಂದ ಆರ್ಥಿಕ ಸಹಕಾರ ಒದಗಿಸಿಕೊಟ್ಟು, ಈ ಯೋಜನೆಗಳ ಯಶಸ್ಸಿಗೆ ಕಾರಣರಾಗ ಬೇಕು ಎಂದು ವೇದಿಕೆಯಲ್ಲಿದ್ದ ಇಲಾಖಾ ಮುಖ್ಯಸ್ಥರಿಗೆ ಮನವಿ ಮಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ, ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ ಸಂಸ್ಥೆಯು ಸಂಘಟಿತ ವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆ ಹಾಗೂ ಸದಸ್ಯರುಗಳ ಸರ್ವತೋಮುಖ ಅಭಿವೃದ್ಧಿಗೆ ಕೈಗಾರಿಕೆ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ಆರ್ಥಿಕ ಸಹಾಯ ಧನ ಒದಗಿಸಲಾಗುವದು ಎಂದರು.

ಕಾರ್ಪೋರೇಷನ್ ಬ್ಯಾಂಕಿನ ನಿವೃತ್ತ ಮಾರ್ಗದರ್ಶನ ವ್ಯವಸ್ಥಾಪಕ ಕೇಕಡ ದೇವಯ್ಯ ಮಾತನಾಡಿ, ಈ ಸಂಘಟನೆ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಬೆಳವಣಿಗೆಗೆ ವಿವಿಧ ಇಲಾಖೆಗಳು ಹಾಗೂ ಬ್ಯಾಂಕುಗಳು ಬೆಂಬಲಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಂಗಾರು ಗುಪ್ತಾಜಿ, ಕಾರ್ಪೋರೇಷನ್ ಬ್ಯಾಂಕು ಚಿಕ್ಕಪೇಟೆ ಶಾಖೆಯ ವ್ಯವಸ್ಥಾಪಕಿ ಕೆ.ಎಸ್. ಕಮಲಾಕ್ಷಿ, ಪ.ಪಂ. ಸದಸ್ಯರಾದ ಪಾಂಡಂಡ ರಚನ್ ಮೇದಪ್ಪ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಜು ಜಾರ್ಜ್ ಮಾತನಾಡಿದರು.

ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್‍ನ ಅಧ್ಯಕ್ಷೆ ಫ್ಯಾನ್ಸಿ ಗಣಪತಿ ಮಾತನಾಡಿ, ಹಲವಾರು ಸಮಸ್ಯೆಗಳ ಹೊರತಾಗಿಯೂ ತಮ್ಮ ಸಂಘಟಿತ ಪ್ರಯತ್ನದಿಂದ ವಿಶೇಷವಾಗಿ ಕಾಲ ಕಾಲಕ್ಕೆ ಒದಗಿದ ನಬಾರ್ಡಿನ, ಜಿಲ್ಲಾ ಕೈಗಾರಿಕಾ ಕೇಂದ್ರದ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ, ಕಾರ್ಪೋರೇಷನ್ ಬ್ಯಾಂಕು ವೀರಾಜಪೇಟೆ ಶಾಖೆಯ ಆರ್ಥಿಕ ಸಹಾಯ, ಮಾರ್ಗದರ್ಶನದಿಂದ ಈ ಸಂಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ನಡಿಕೇರಿಯಂಡ ಕರುಂಬಯ್ಯ, ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಬಿ.ಪಿ. ಮುದ್ದಣ್ಣ ಇತರರು ಇದ್ದರು.