ಕುಶಾಲನಗರ, ಆ. 7: ಯುವಪೀಳಿಗೆಗೆ ಸಾಂಪ್ರದಾಯಿಕ ಆಹಾರ ಪದ್ಧತಿ ಬಗ್ಗೆ ಸಂಘಸಂಸ್ಥೆಗಳ ಮೂಲಕ ಅರಿವು ಮೂಡಿಸಬೇಕಾಗಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್‍ಕುಮಾರ್ ತಿಳಿಸಿದ್ದಾರೆ.ಅವರು ಕುಶಾಲನಗರ ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಗೌಡ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿದ್ದ ಆಟಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯವಂತ ಬದುಕು ಕಾಣಲು ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜದ ಮಾಜಿ ಅಧ್ಯಕ್ಷೆ ಅಮೆ ಕಮಲ ಗಣಪತಿ ಮಾತನಾಡಿ, ಹಬ್ಬ ಹರಿದಿನಗಳ ಆಚರಣೆ ಮೂಲಕ ಸಮುದಾಯಗಳಲ್ಲಿ ಒಗ್ಗಟ್ಟು ಕಾಣಲು ಸಾಧ್ಯ ಎಂದರು. ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೇಚಪ್ಪನ ಪ್ರಮೀಳಾ ಮೋಹನ್, ಯುವಕ ಸಂಘದ ಉಪಾಧ್ಯಕ್ಷರ ಚಿಲ್ಲನ ಗಣಿಪ್ರಸಾದ್, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮಾದಪ್ಪ ಪಾಲ್ಗೊಂಡು ಮಾತನಾಡಿದರು.

ಬೈಮನ ಭೋಜಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಷಾ, ಲತಾ ಅವರಿಂದ ಪ್ರಾರ್ಥನೆ, ಸೂದನ ಲೀಲಾ ಗೋಪಾಲ್ ಸ್ವಾಗತಿಸಿ, ಕುದುಪಜೆ ಶಾಂತಿ ಭೋಜಪ್ಪ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಆಟಿ ಸೊಪ್ಪಿನಿಂದ ತಯಾರಿಸಿದ ವಿವಿಧ ರೀತಿಯ ಭಕ್ಷ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಆಟಿ ಪಾಯಸ, ಹಲ್ವ, ವಿವಿಧ ರೀತಿಯ ಸಿಹಿ ತಿಂಡಿಗಳು, ರೊಟ್ಟಿ, ನೀರುದೋಸೆ, ಇಡ್ಲಿ, ನಾಟಿ ಕೋಳಿ ಸಾರು, ಪತ್ರೊಡೆ, ಕಡುಬು, ಕಣಲೆ ಸಾರು, ಪುಳಿ ಮುಂಚಿ ಮೊದಲಾದ ಭಕ್ಷ್ಯಗಳು ಗಮನ ಸೆಳೆದವು.