ವೀರಾಜಪೇಟೆ, ಆ. 6: ಇಲ್ಲಿಗೆ ಸಮೀಪದ ಐಮಂಗಲ ಗ್ರಾಮದ ಕುಂಡ್ರಂಡ ಚಂಗಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ನಿತ್ಯ ತೋಟಗಳಲ್ಲಿ ದಾಳಿ ನಡೆಸುತ್ತಿವೆ. ಧಾಳಿಯಿಂದಾಗಿ ಬಾಳೆ, ತೆಂಗು ಅಡಿಕೆ, ಕಾಫಿ ಗಿಡ ಹಾಗೂ ಫಸಲು ನಾಶವಾಗಿರುವದರಿಂದ ತೋಟದ ಮಾಲೀಕರಿಗೆ ಈವರೆಗೆ ರೂ ಒಂದು ಲಕ್ಷ ನಷ್ಟ ಸಂಭವಿಸಿದೆ ಎಂದು ಚಂಗಪ್ಪ ಅವರ ಪುತ್ರರಾದ ತಿಮ್ಮಯ್ಯ ಹಾಗೂ ಪೊನ್ನಪ್ಪ ದೂರಿದ್ದಾರೆ. ಐಮಂಗಲ ಗ್ರಾಮದಲ್ಲಿ ಕಾಡಾನೆಗಳು ಶಿಬಿರ ಹೂಡಿರುವದಾಗಿ ಅರಣ್ಯ ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಈ ತನಕ ಇಲಾಖೆ ಯಾವದೇ ಕ್ರಮಕೈಗೊಂಡಿಲ್ಲ. ನಿರಂತರ ಕಾಡಾನೆಗಳ ದಾಳಿಯಿಂದ ದಿನವೂ ಗಿಡಗಳು ಹಾಗೂ ಫಸಲು ನಾಶವಾಗುತ್ತಿದೆ. ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಮಾಡುತ್ತಿಲ್ಲ. ತೋಟದಲ್ಲಿ ಕಾಡಾನೆಗಳ ಶಿಬಿರದಿಂದ ಭಯ ಭೀತಿಗೊಂಡಿರುವ ಗ್ರಾಮಸ್ಥರು ಗ್ರಾಮದಲ್ಲಿ ಸಂಚರಿಸಲು ಹೆದರುತ್ತಿದ್ದಾರೆ.ಅರಣ್ಯ ಇಲಾಖೆ ತಕ್ಷಣ ಗ್ರಾಮಕ್ಕೆ ಬಂದು ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡದಿದ್ದರೆ ಎರಡು ದಿನಗಳ ಅವಧಿಯಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ವೀರಾಜಪೇಟೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಪೊನ್ನಪ್ಪ ಹಾಗೂ ಗ್ರಾಮಸ್ಥರು ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.