ಮಡಿಕೇರಿ, ಆ. 7: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಶವಾಗಾರದಲ್ಲಿ ಶೈಥ್ಯಾಗಾರಕ್ಕೆ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಚಾಲನೆ ನೀಡಿದರು.ಸುಮಾರು ಆರು ಶವಗಳನ್ನು ಸಂರಕ್ಷಿಸಿಡಬಹುದಾದ ಶೈಥ್ಯಾಗಾರದಲ್ಲಿ ಅನಿಯಮಿತ ಸಮಯದವರೆಗೆ ಶವಗಳನ್ನು ಸಂರಕ್ಷಿಸಬಹುದು. ಅಪರಿಚಿತ ಶವಗಳು ಪತ್ತೆಯಾದರೆ ಅದರ ವಾರಿಸುದಾರರನ್ನು ಪತ್ತೆಹಚ್ಚುವವರೆಗೆ; ಯಾವದಾದರೂ ವ್ಯಕ್ತಿ ಸಾವನ್ನಪ್ಪಿ ಸಂಬಂಧಿಕರು ಬರುವದು ತಡವಾದರೆ ಶವಗಳನ್ನು ಸಂರಕ್ಷಿಸಲು ಶೀತಲಯಂತ್ರಗಳು ಸಹಕಾರಿಯಾಗಲಿವೆ.

ಇದರೊಂದಿಗೆ ದೇಹದಲ್ಲಿ ಸೋಂಕು ಬಾಧಿಸಲ್ಪಟ್ಟರೆ ಯಾವ ಸೋಂಕಿಗೆ ಯಾವ ರೋಗ ನಿರೋಧಕ ಚಿಕಿತ್ಸೆ ಕೊಡಬೇಕು ಎಂಬ ಬಗ್ಗೆ ಪತ್ತೆ ಹಚ್ಚಿ ಸೂಕ್ತ ಔಷಧಿ ನೀಡುವ ನಿಟ್ಟಿನಲ್ಲಿ ಮೈಕ್ರೋ ಬಯಾಲಜಿ ವಿಭಾಗಕ್ಕೂ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

(ಮೊದಲ ಪುಟದಿಂದ) ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು ಜಿಲ್ಲಾಸ್ಪತ್ರೆಯು ಕಳೆದ 2 ವರ್ಷಗಳಿಂದೀಚೆಗೆ ಸುಧಾರಣೆ ಕಾಣುತ್ತಿದ್ದು, ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿವೇಶನದ ಅಗತ್ಯವಿದ್ದಲ್ಲಿ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಸಲಹೆಯಿತ್ತ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ಕೂಡ ವೈದ್ಯರ ಮೇಲೆ ನಂಬಿಕೆ ಕಳೆದುಕೊಳ್ಳಬಾರದು ಎಂದರು.

ಈ ಸಂದರ್ಭ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಮಹೇಂದ್ರ, ಜಿಲ್ಲಾ ಸರ್ಜನ್ ಡಾ. ಅಜೀಜ್, ಸ್ಥಾನೀಯ ವೈದ್ಯಾಧಿಕಾರಿ ಡಾ. ಸದಾಶಿವಪ್ಪ, ಡಿವೈಎಸ್ಪಿ ಸುಂದರ್‍ರಾಜ್ ಇತರರಿದ್ದರು.