ಕೂಡಿಗೆ, ಆ. 6: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು.

ಕೂಡಿಗೆ ಗ್ರಾಮ ಪಂಚಾಯಿತಿಗೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಬ್ಯಾಡಗೊಟ್ಟ ಗ್ರಾಮದಲ್ಲಿ ನಿವೇಶನ ರಹಿತರಿಗೆ ನೀಡಲು ಜಾಗ ಗುರುತಿಸಿ ಮಂಜೂರು ಮಾಡಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹೆಸರಿನಲ್ಲಿ ಆರ್‍ಟಿಸಿ ಇದ್ದು, ಇದುವರೆಗೆ 116 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದರೂ, ನಿವೇಶನ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯಿತಿ ಸದಸ್ಯ ಕೆ.ವೈ ರವಿ, ಕೆ.ಟಿ. ಈರಯ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ. ನೀರುಗಂಟಿಗಳಿಗೆ ಮಾಸಿಕ ವೇತನವನ್ನು ಹೆಚ್ಚಿಸಲು ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು. ಹಾಜರಿದ್ದ ಸದಸ್ಯರುಗಳು ತಮ್ಮ ತಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ನಡೆಸುವದರ ಬಗ್ಗೆ ಸಮರ್ಪಕ ಮಾಹಿತಿಯನ್ನು ಸಭೆಗೆ ನೀಡಿದರು. ಈ ವಿಚಾರಗಳನ್ನು ಮುಂದೆ ನಡೆಯುವ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಮುಖ್ಯವಾಗಿರುವ ವಿಷಯಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವದರ ಬಗ್ಗೆ ರಾಮಚಂದ್ರ, ಟಿ.ಕೆ. ವಿಶ್ವನಾಥ್, ಕೆ.ಜಿ. ಮೋಹಿನಿ, ಹೆಚ್.ಎಸ್. ರವಿ ವಿಷಯ ಪ್ರಸ್ತಾಪಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ನಿಗದಿ ಮಾಡಿದ ತೆರಿಗೆ ಹೆಚ್ಚುವರಿಯಾದರೂ ಕಡ್ಡಾಯವಾಗಿ ವಸೂಲಾತಿ ಮಾಡುವದರಿಂದ ಗ್ರಾಮದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲ ವಾಗುವದು ಎಂದು ಸದಸ್ಯರು ಸಭೆಗೆ ತಿಳಿಸಿದರು.

ಈ ಸಂದರ್ಭ ಹಿಂದಿನ ಜಮಾ ಖರ್ಚುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಚರ್ಚಿಸಿ ಅವುಗಳ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನಿಸುವದು. ಗ್ರಾ.ಪಂ. ವತಿಯಿಂದ ಸರಿಪಡಿಸ ಬಹುದಾದ ಕೆಲಸಗಳನ್ನು ಅರ್ಜಿ ದಾರರಿಗೆ ಮಾಹಿತಿ ನೀಡಿ ನಂತರ ದಾಖಲಾತಿಗಳ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಸದಸ್ಯರು ತಿಳಿಸಿದರು. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡುತ್ತ, ಬ್ಯಾಡಗೊಟ್ಟ ಗ್ರಾಮಕ್ಕೆ ಕಂದಾಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅಡಚಣೆ ಇದ್ದ ಕಡತಗಳನ್ನು ಸರಿಪಡಿಸಲು ಸೂಚಿಸಿದ ಮೇರೆಗೆ ಕಡತಗಳನ್ನು ಸರಿಪಡಿಸಲಾಗಿ, ಜಾಗವನ್ನು ಮಂಜೂರು ಮಾಡಲಾಗಿದ್ದು, ಈ ಜಾಗವು ಶೀತ ಪ್ರದೇಶವಾಗಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ಸದಸ್ಯರುಗಳ ಸಲಹೆ ಸೂಚನೆಯ ಮೇರೆಗೆ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ನಿವೇಶನದ ಬಗ್ಗೆ ಮಾತನಾಡುತ್ತ, ಗ್ರಾ.ಪಂ.ನಿಂದ ಮಂಜೂರಾಗಿರುವ ಜಾಗದ ಸಮೀಪದಲ್ಲಿ ಕಕ್ಕೆಹೊಳೆ ಹರಿಯುತ್ತಿದ್ದು, ನದಿಯ ಪ್ರವಾಹವು ಬರುವ ಸ್ಥಳವು ಗುರುತಿಸಲ್ಪಟ್ಟಿದೆ. ಅಲ್ಲದೆ, ಈ ಜಾಗದ ಮಣ್ಣು ಕುಸಿತಕ್ಕೊಳಗಾಗುವ ಮಣ್ಣಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್, ಸದಸ್ಯರುಗಳಾದ ರತ್ನಮ್ಮ, ಹೆಚ್.ಎಸ್. ರವಿ, ಪುಷ್ಪ, ಜಯಶ್ರೀ, ಕಲ್ಪನ, ವಿಶ್ವನಾಥ್, ಮಂಜಯ್ಯ, ದಸ್ವಿ, ಕೆ.ವೈ. ರವಿ, ಈರಯ್ಯ, ಮೋಹಿನಿ ಇದ್ದರು. ಕೆ.ಎಸ್. ರವಿ ಸ್ವಾಗತಿಸಿ, ವಂದಿಸಿದರು.