ಗೋಣಿಕೊಪ್ಪಲು, ಆ. 6: ಬಾಳಾಜಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡನ್ನು ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ತಂಡ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿತು. ಮಾಯಮುಡಿ ಹಾಗೂ ಬಾಳಾಜಿ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ 13 ಆನೆಗಳಲ್ಲಿ 9 ಆನೆಗಳನ್ನು ಹೆಬ್ಬಾಲೆ ದೇವರ ಕಾಡಿಗೆ ಸೇರಿಸಲಾಗಿದೆ. ಉಳಿದಂತೆ ಗುಂಪಿನಿಂದ ಚದುರಿ ಹೋಗಿರುವ 4 ಆನೆಗಳು ಅರ್ವತೋಕ್ಲು ಗ್ರಾಮದ ಕೀರೆ ಹೊಳೆ ಬದಿಗಳಲ್ಲಿ ಉಳಿದುಕೊಂಡಿವೆ.

ಮುಕ್ಕಾಟೀರ ಸುಬ್ರಮಣಿ ಹಾಗೂ ಪ್ರಮೀಳ ಎಂಬವರ ತೋಟದಲ್ಲಿ ಸೇರಿಕೊಂಡಿದ್ದ ಆನೆಗಳನ್ನು ಕಾಡಿಗೆ ಅಟ್ಟಲು ಮುಂದಾದ ಸಂದರ್ಭ ಸಂಜೆ ಚೆನ್ನಂಗೊಲ್ಲಿ ಮೂಲಕ ಹೆಬ್ಬಾಲೆ ದೇವರಕಾಡಿಗೆ 9 ಆನೆಗಳು ಸೇರಿ ಕೊಂಡವು. ಗುಂಪಿನಿಂದ ಬೇರೆಯಾದ 4 ಆನೆಗಳು ಬಾಳಾಜಿ ಹಾಗೂ ಅರ್ವತೋಕ್ಲು ಗ್ರಾಮಗಳತ್ತ ಸಾಗಿ, ಕೀರೆ ಹೊಳೆ ಬದಿಯಲ್ಲಿ ಸೇರಿಕೊಂಡಿವೆ. ಇದಕ್ಕೂ ಮುನ್ನ ಚೆನ್ನಂಗೊಲ್ಲಿಯ ಜನರಿರುವ ಪ್ರದೇಶದತ್ತ ಸಾಗಿದ ಆನೆಗಳು ಕಾರ್ಯಾಚರಣೆ ತಂಡಕ್ಕೆ ಆತಂಕ ಮೂಡಿಸಿದವು. ಕೂಡಲೇ ಎಚ್ಚೆತ್ತುಕೊಂಡು ತೋಟದ್ತತ ಓಡಿಸಿ ಅನಾಹುತದಿಂದ ತಪ್ಪಿಸಲಾಯಿತು.

ಆರ್‍ಆರ್‍ಟಿ ತಂಡದ ಪೆಮ್ಮುಡಿಯಂಡ ಸಂಜು, ರಾಜು, ಸುರೇಶ್, ಮೋಹನ್, ದಿನೇಶ್ ಹಾಗೂ ಜೆ ಆರ್ ಸುರೇಶ್, ಹಾಗೂ ತಿತಿಮತಿ ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಅಶೋಕ್, ವನಪಾಲಕ ಗಣಪತಿ ಪಾಲ್ಗೊಂಡಿದ್ದರು.