ಮಡಿಕೇರಿ, ಆ. 7: ಕೇಂದ್ರ ಸರ್ಕಾರದ ಮಹತ್ವದ ವಿಶೇಷ ಕಾಫಿ ಸಾಲ ಮರುಪಾವತಿ ಯೋಜನೆಯಡಿ ಪೂರ್ಣ ಹಣ ಪಾವತಿ ಮಾಡಿದ್ದರೂ ಯೋಜನೆಯ ಸೌಲಭ್ಯ ನೀಡದ ಬ್ಯಾಂಕೊಂದರ ವಿರುದ್ಧ ಬೆಳೆಗಾರರೊಬ್ಬರು ಸತತ ಕಾನೂನು ಹೋರಾಟ ನಡೆಸಿದ್ದು, ರಾಷ್ಟೀಯ ಗ್ರಾಹಕರ ಆಯೋಗ ಬೆಳೆಗಾರರ ಪರ ಆದೇಶ ನೀಡಿದೆ. ಗ್ರಾಹಕ ವೇದಿಕೆ ಬಡ್ಡಿ ಪಾವತಿಸುವಂತೆ ನೀಡಿದ ಆದೇಶ ವಿರುದ್ಧ ಕೆನರಾ ಬ್ಯಾಂಕ್ ರಾಷ್ಟ್ರೀಯ ಗ್ರಾಹಕರ ಆಯೋಗಕ್ಕೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕøತಗೊಂಡಿದ್ದು, ಕೊಡಗು ಜಿಲ್ಲಾ ಗ್ರಾಹಕರ ವೇದಿಕೆಯ ತೀರ್ಪನ್ನು ಅದು ಎತ್ತಿಹಿಡಿದಿದೆ.

2005ರ ಮೇ 26ರಂದು ಕೇಂದ್ರ ಸರ್ಕಾರ ವಿಶೇಷ ಕಾಫಿ ಅವಧಿ ಸಾಲದ 3 ವರ್ಷದ ಬಡ್ಡಿಯಲ್ಲಿ 1/3 ಭಾಗ ಪಾವತಿಸಿದವರಿಗೆ ಸಂಬಂಧಪಟ್ಟ ಬ್ಯಾಂಕಿನವರು 1/3 ಭಾಗ ಪಾವತಿಸಬೇಕೆಂದು ಘೋಷಿಸಿದ್ದರು. ಸುಂಟಿಕೊಪ್ಪದ ಬೆಳೆಗಾರ ಕೆ.ಎಸ್. ಸೀತರಾಮ್ ಮೇ 26ರ ಮುಂಚಿತವಾಗಿ ತಮ್ಮ ಸಾಲವನ್ನು ಪೂರ್ತಿಯಾಗಿ ಕೆನರಾ ಬ್ಯಾಂಕಿಗೆ ಮರುಪಾವತಿ ಮಾಡಿದ್ದರು. ಹೀಗಿದ್ದರೂ ಬ್ಯಾಂಕ್ 2/3 ಭಾಗ ಬಡ್ಡಿಯನ್ನು ಸೀತಾರಾಮ್‍ಗೆ ಪಾವತಿಸಲು ನಿರಾಕರಿಸಿತ್ತು.

ಈ ಹಿನ್ನೆಲೆಯಲ್ಲಿ ಬ್ಯಾಂಕಿನ ವಿರುದ್ಧ ಸೀತಾರಾಮ್ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇದಿಕೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್ 1/3 ಭಾಗ ಬಡ್ಡಿ, 500 ರೂ. ದಂಡ ಮತ್ತು 500 ರೂ. ಖರ್ಚು ಹಾಗೂ ಕಾಫಿ ಮಂಡಳಿಯವರು 1/3 ಭಾಗ ಬಡ್ಡಿ ನೀಡುವಂತೆ ತೀರ್ಪು ನೀಡಿತ್ತು.

ಆದರೆ ಇದರ ವಿರುದ್ಧ ಕೆನರಾ ಬ್ಯಾಂಕ್ ಮತ್ತು ಕಾಫಿ ಮಂಡಳಿಯವರು ರಾಜ್ಯ ಗ್ರಾಹಕರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅದು ಅಲ್ಲಿ ತಿರಸ್ಕøತಗೊಂಡು ಜಿಲ್ಲಾ ಗ್ರಾಹಕರ ವೇದಿಕೆಯ ತೀರ್ಪನ್ನೇ ರಾಷ್ಟ್ರೀಯ ಗ್ರಾಹಕರ ವೇದಿಕೆಯು ಎತ್ತಿ ಹಿಡಿದು ಬ್ಯಾಂಕ್ ಮತ್ತು ಕಾಫಿ ಮಂಡಳಿ ಸೀತಾರಾಮ್‍ಗೆ 1/3 ಭಾಗ ಸಾಲದ ಮೇಲಿನ ಬಡ್ಡಿ ಹಣ ಪಾವತಿಸುವಂತೆ ಆದೇಶಿಸಿದೆ.

ಈ ಕುರಿತು ತೀರ್ಪು ನೀಡಿರುವ ನ್ಯಾಯಮೂರ್ತಿ ಕೆ.ಎಸ್. ಗುಪ್ತ ಮತ್ತು ಸದಸ್ಯ ಡಾ. ಪಿ.ಡಿ. ಶೆಣೈ ತಮ್ಮ ಆದೇಶದಲ್ಲಿ ‘ಕೇಂದ್ರ ಸರ್ಕಾರದ ಯೋಜನೆಯು ಸಾಲಗಾರರನ್ನು ಪ್ರೋತ್ಸಾಹಿಸುವದರೊಂದಿಗೆ ಸಾಲದ ಹಣವನ್ನು ಪ್ರಾಮಾಣಿಕವಾಗಿ ಪಾವತಿಸಿದವರನ್ನು ಉತ್ತೇಜಿಸುವದಾಗಿದೆ. ಆದರೆ ಕಾಫಿ ಮಂಡಳಿ ಮತ್ತು ಬ್ಯಾಂಕ್ ಸೀತಾರಾಮ್‍ಗೆ ಬಡ್ಡಿ ಹಣ ನೀಡದೆ ಸತಾಯಿಸುತ್ತಿರುವದು ಸರಿಯಲ್ಲ’ ಎಂದಿದೆ.

ಬ್ಯಾಂಕ್ ಮತ್ತು ಕಾಫಿ ಮಂಡಳಿಯ ಸರ್ಕಾರದ ಯೋಜನೆ ಪ್ರಕಟವಾಗುವ ಮುನ್ನವೇ ಬೆಳೆಗಾರ ಸೀತಾರಾಮ್ ಸಾಲ ಮರುಪಾವತಿ ಮಾಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಬಡ್ಡಿ ಹಣ ನೀಡಲಾಗುವದಿಲ್ಲ ಎಂಬ ವಾದವನ್ನು ಗ್ರಾಹಕರ ಆಯೋಗದ ಮುಂದೆ ಮಂಡಿಸಿದ್ದರು.

ನಂತರ 2007ರಲ್ಲಿ ಬ್ಯಾಂಕ್ ಮತ್ತು ಕಾಫಿ ಮಂಡಳಿಯವರು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿ ಅಲ್ಲಿಯೂ ತಿರಸ್ಕರಿಸಬಹುದೆಂಬ ಭೀತಿಯಿಂದ ಅಂದಿನ ಕಾಫಿ ಮಂಡಳಿ ಅಧ್ಯಕ್ಷರು ವಾಣಿಜ್ಯ ಕಾರ್ಯದರ್ಶಿಯವರಿಗೆ ಸಾಲದ ಪೂರ್ಣ ಹಣವನ್ನು ಪಾವತಿಸಿದವರಿಗೆ ವಿಶೇಷ ಯೋಜನೆ ಸೌಲಭ್ಯವನ್ನು ಕೊಡಬಾರದೆಂದು ತಮಗೆ ಪತ್ರ ಬರೆಯಬೇಕೆಂದು ಪತ್ರ ಮುಖೇನ ವಿನಂತಿಸಿಕೊಂಡರು. ಅಧ್ಯಕ್ಷರ ಕೋರಿಕೆಯ ಮೇರೆಗೆ ಕಾರ್ಯದರ್ಶಿಯವರು ಕಾಫಿ ಮಂಡಳಿಗೆ ಪತ್ರ ಬರೆದರು. ಈ ಪತ್ರದ ಆಧಾರದ ಮೇಲೆ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಅಂಗೀಕರಿಸಲ್ಪಟ್ಟಿತು.

ಆದರೆ ಹತ್ತು ವರ್ಷಗಳ ನಂತರ ಈಗ ಸುಪ್ರೀಂಕೋರ್ಟ್ ಸಂಬಂಧಪಟ್ಟ ಎಲ್ಲರ ವಾದವನ್ನು ಆಲಿಸಿ ಕೆನರಾ ಬ್ಯಾಂಕ್ ಮತ್ತು ಕಾಫಿ ಮಂಡಳಿಯವರ ಮೇಲ್ಮನವಿಯನ್ನು ತಿರಸ್ಕರಿಸಿ ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪನ್ನು ಎತ್ತಿಹಿಡಿದಿದೆ.