ಮಡಿಕೇರಿ, ಆ. 7: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಐದು ಮಂದಿಯ ತಂಡವೊಂದು, ಕುಶಾಲನಗರದ ಆನೆಕಾಡು ಬಳಿ, ನಡುರಾತ್ರಿಯಲ್ಲಿ ಲಾರಿ ಚಾಲಕನೊಬ್ಬನನ್ನು ಬೆದರಿಸಿ ನಗದು ರೂ. 6 ಸಾವಿರ ದೋಚಿರುವ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.ಪ್ರಮುಖ ಆರೋಪಿ ರಾಮನಗರ ಜಿಲ್ಲೆ ಮಾಗಡಿ ನಿವಾಸಿ ಆನಂದ್ ಎಂಬಾತನನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಇತರ ನಾಲ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಜುಲೈ 18 ರಂದು ಬೆಂಗಳೂರಿನ ನಿವಾಸಿ, ಆಲಿಖಾನ್ ಎಂಬವರಿಗೆ ಸೇರಿದ ಲಾರಿಯೊಂದರ ಚಾಲಕ ಮಂಜು ಎಂಬವರು, ಸರಕು ಸಾಗಾಣಿಕೆಗೆಂದು ಮಂಗಳೂರಿಗೆ ಹೊರಟಿದ್ದು, ಮಧ್ಯರಾತ್ರಿ 1.45ರ ಸುಮಾರಿಗೆ ಆನೆಕಾಡುವಿನ ಬಳಿಯಲ್ಲಿ ಹೊಟೇಲ್‍ವೊಂದರ ಎದುರು ಲಾರಿ ನಿಲ್ಲಿಸಿ ನಿದ್ದೆ ಮಾಡುತ್ತಿದ್ದುದಾಗಿ ಗೊತ್ತಾಗಿದೆ.

ಈ ವೇಳೆ ಬೆಂಗಳೂರು ಹೊರವಲಯದ ಮಾಗಡಿ ನಿವಾಸಿಯೋರ್ವ ತನ್ನ ಕಾರಿನಲ್ಲಿ ನಾಲ್ವರು ಸ್ನೇಹಿತರೊಂದಿಗೆ ಮಂಗಳೂರಿನತ್ತ ಪ್ರಯಾಣಿಸುವ ಸಲುವಾಗಿ ಇದೇ ಮಾರ್ಗದಲ್ಲಿ ಬಂದಿದ್ದಾರೆ. ಈ ವೇಳೆ ಹುಣಸೂರು, ಪಿರಿಯಾಪಟ್ಟಣ ಮುಂತಾದೆಡೆಗಳಲ್ಲಿ ಅಲ್ಲಲ್ಲಿ ಸಿಕ್ಕ ವಾಹನಗಳ ಚಾಲಕರುಗಳನ್ನು ಬೆದರಿಸಿರುವದು ಬೆಳಕಿಗೆ ಬಂದಿದೆ. ಅಲ್ಲದೆ ಆನೆಕಾಡು ಬಳಿ ಲಾರಿ ನಿಲ್ಲಿಸಿ ನಿದ್ರಿಸುತ್ತಿದ್ದ ಮಂಜು ಹಾಗೂ ಕ್ಲೀನರ್ ಬಸವರಾಜ್ ಎಂಬವರನ್ನು ಬೆದರಿಸಿದ್ದಲ್ಲದೆ, ಚಾಲಕ ಮಂಜುವಿಗೆ ಮಾರಕಾಸ್ತ್ರದಿಂದ ಗಾಯಗೊಳಿಸಿ ರೂ. ಆರು ಸಾವಿರ ನಗರು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಲಾರಿ ಚಾಲಕ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಆ ಮೇರೆಗೆ ಮೊಕದ್ದಮೆ ದಾಖಲಾಗಿತ್ತು. ಇದೀಗ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಕೊಡಗು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಸುಳಿವು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದರೋಡೆ ಪ್ರಕರಣ ಐಪಿಸಿ 392 ಹಾಗೂ ಚಾಲಕನಿಗೆ ಗಾಯಗೊಳಿಸಿದ ಸಂಬಂಧ 394ರ ಅಡಿಯಲ್ಲಿ ತನಿಖೆಯೊಂದಿಗೆ ಪ್ರಮುಖ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಇತರರ ಬಂಧನಕ್ಕೆ ಬಲೆ ಬೀಸಿರುವದಾಗಿ ತಿಳಿದು ಬಂದಿದೆ.