ಮಡಿಕೇರಿ, ಆ. 6: ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳನ್ನು ಪಾಲನೆ ಮಾಡುವದರ ಮೂಲಕ ಸಂಸ್ಕಾರವಂತರಾಗಬೇಕು ಎಂದು ಮುಳ್ಳೇರಿಯ ಮಂಡಲ ಹವ್ಯಕ ವಲಯ ಅಧ್ಯಕ್ಷ ಪ್ರೊ. ಕೃಷ್ಣಭಟ್ ಹೇಳಿದರು. ನಗರದ ಓಂಕಾರ ಸದನದಲ್ಲಿ ಇಂದು ಹವ್ಯಕ ಮಹಾಮಂಡಲ ಮುಳ್ಳೇರಿಯ ಮಂಡಲದ ಕೊಡಗು ವಲಯದ ಹೇಮಲಂಬಿ ವಲಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಲಯೋತ್ಸವ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಹವ್ಯಕರು ಒಂದಾಗಬೇಕು. ಹಿರಿಯ ನಾಗರಿಕರ ಸನ್ಮಾನ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವದು, ಹವ್ಯಕ ಸಾಂಪ್ರದಾಯಿಕ ಅಡುಗೆಗಳನ್ನು ಗುರುತಿಸಿ ಪ್ರೋತ್ಸಾಹಿಸುವದು, ಗೋಸಾಕಣೆಯಲ್ಲಿ ತೊಡಗಿ ಸಮಾಜಸೇವೆ ಮಾಡುವವರನ್ನು ಸ್ಮರಿಸುವದು ಮುಂತಾದ ಕಾರ್ಯಕ್ರಮಗಳೊಂದಿಗೆ ಹವ್ಯಕ ಸಮಾಜದ ಒಗ್ಗೂಡುವಿಕೆ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಹವ್ಯಕ ವಲಯ ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಸರ್ವಮೂಲೆ, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು ಮಾತನಾಡಿದರು. ಕೊಡಗು ವಲಯ ಉಸ್ತುವಾರಿ ಕೃಷ್ಣಮೋಹನ, ಕಾರ್ಯದರ್ಶಿ ಸತ್ಯಶಂಕರ ಹಿಳ್ಳೆಮನೆ, ಕೊಡಗು ಹವ್ಯಕ ವಲಯದ ಅಧ್ಯಕ್ಷ ನಾರಾಯಣಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹವ್ಯಕ ಮಹಿಳೆಯರು ಕುಂಕುಮಾರ್ಚನೆ ನೆರವೇರಿಸಿದರು. ಬಳಿಕ ವಿವಿಧ ಸ್ತ್ರೋತ್ರಗಳ ಸಾಮೂಹಿಕ ಪಠಣ ಮಾಡಲಾಯಿತು. ಅರುವತ್ತು ಮೀರಿದ ಹವ್ಯಕ ಸಮಾಜದ ದಂಪತಿಗಳನ್ನು, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು, ಗೋಸಾಕಾಣೆ ಮಾಡುತ್ತಿರುವ ವಲಯ ಶಿಷ್ಯರನ್ನು ಸನ್ಮಾನಿಸಲಾಯಿತು. ಹವ್ಯಕ ಮಹಿಳೆಯರು ಸಾಂಪ್ರದಾಯಿಕ ಅಡುಗೆಗಳನ್ನು ಪ್ರದರ್ಶಿಸಿದರು. ಅಮ್ಮತ್ತಿ ವಲಯದ ಶ್ರೀನಿವಾಸಮೂರ್ತಿ ವಲಯೋತ್ಸವ ಗೀತೆಯನ್ನು ಹಾಡಿದರು. ಈ ಸಂದರ್ಭ ಕೊಡಗು ಹವ್ಯಕ ವಲಯದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.