ಸೋಮವಾರಪೇಟೆ, ಆ.7: ಇಲ್ಲಿನ ತಾಲೂಕು ಕಚೇರಿಯಲ್ಲಿರುವ ಆರ್‍ಟಿಸಿ ವಿತರಣಾ ಕೇಂದ್ರದ ಇನ್‍ವರ್ಟರ್ ಸುಟ್ಟುಹೋದ ಪರಿಣಾಮ ರೈತರು, ಕೃಷಿಕರು ತಮ್ಮ ಪಹಣಿಪತ್ರ ಪಡೆಯಲು ಅಸಾಧ್ಯವಾದ ಪರಿಸ್ಥಿತಿಯನ್ನು ಮನಗಂಡ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ತಮ್ಮ ಕಚೇರಿಯಿಂದ ಇನ್‍ವರ್ಟರ್ ನೀಡಿದ್ದಾರೆ.

ಕಳೆದ ಸೋಮವಾರದಂದು ಹತ್ತಾರು ಮಂದಿ ಸಾರ್ವಜನಿಕರು ಆರ್‍ಟಿಸಿಗಾಗಿ ತಾಲೂಕು ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭ ತಾಂತ್ರಿಕ ಕಾರಣಗಳಿಂದ ಕಂಪ್ಯೂಟರ್‍ಗಳಿಗೆ ವಿದ್ಯುತ್ ಸರಬರಾಜು ಮಾಡುವ ಇನ್‍ವರ್ಟರ್ ಸುಟ್ಟುಹೋಗಿದ್ದು, ತಾಲೂಕು ಕಚೇರಿಯ ಅಧಿಕಾರಿಗಳು ಬದಲಿ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಜಾತ್ಯತೀತ ಜನತಾದಳದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್‍ರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೇ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದರು. ಇನ್‍ವರ್ಟರ್ ಕೆಟ್ಟುಹೋಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಅಲ್ಲಿಂದ ಹಣ ಬಂದ ನಂತರ ನೂತನ ಇನ್‍ವರ್ಟರ್ ಅಳವಡಿಸುವದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.

ಆದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿ ಇನ್‍ವರ್ಟರ್ ಖರೀದಿಸಿ ನಂತರ ಪಹಣಿಪತ್ರ ನೀಡಲು ಕೆಲ ದಿನಗಳು ಬೇಕಾಗಿದ್ದು, ಅಲ್ಲಿಯವರೆಗೂ ರೈತರು ಆರ್‍ಟಿಸಿಗಾಗಿ ಕಾಯುವಂತಹ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಂಡ ಶಾಸಕ ಅಪ್ಪಚ್ಚುರಂಜನ್ ಅವರು, ತಮ್ಮ ಕಚೇರಿಯಲ್ಲಿದ್ದ ಇನ್‍ವರ್ಟರ್‍ನ್ನು ಆರ್‍ಟಿಸಿ ಕೇಂದ್ರಕ್ಕೆ ನೀಡಿದ್ದಾರೆ.

ಸರ್ಕಾರದ ಸೌಲಭ್ಯ ಸೇರಿದಂತೆ ಇನ್ನಿತರ ಕೆಲಸಗಳಿಗೆ ರೈತರಿಗೆ ಆರ್‍ಟಿಸಿ ಅವಶ್ಯವಿದ್ದು, ತಾಂತ್ರಿಕ ಕಾರಣಗಳಿಂದ ವಿತರಣೆಗೆ ಅಡಚಣೆಯಾಗಿರುವದರಿಂದ ತಮ್ಮ ಕಚೇರಿಯಿಂದ ಇನ್‍ವರ್ಟರ್ ನೀಡಲಾಗಿದೆ. ರೈತರು ಪಹಣಿ ಪತ್ರವನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕರು ‘ಶಕ್ತಿ’ ಮೂಲಕ ಮಾಹಿತಿ ನೀಡಿದ್ದಾರೆ.