ಆಲೂರು-ಸಿದ್ದಾಪುರ, ಆ. 6: ಶಿಕ್ಷಣ ಮತ್ತು ಜನಜಾಗೃತಿಯಿಂದ ಡೆಂಘಿ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣನಂದ್ ಅಭಿಪ್ರಾಯ ಪಟ್ಟರು.

ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಡೆಂಘಿ ವಿರೋಧಿ ಮಾಸಾಚರಣೆ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಮನೆಯ ಪರಿಸರವನ್ನು ಶುಚಿತ್ವದಿಂದ ಕಾಪಾಡಿಕೊಳ್ಳುವದು, ಮನೆಯಲ್ಲಿ ನೀರಿಗಾಗಿ ಬಳಸುವ ಟ್ಯಾಂಕ್, ಬ್ಯಾರಲ್‍ಗಳನ್ನು ಸ್ವಚ್ಛಗೊಳಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವದು, ಮನೆಯ ಸುತ್ತಮುತ್ತ ಚರಂಡಿ ನೀರು ಹರಿಯದೆ ಒಂದೆ ಕಡೆಯಲ್ಲಿ ನಿಂತುಕೊಳ್ಳದಂತೆ ಎಚ್ಚರ ವಹಿಸಿಸುವದು, ಪ್ಲಾಸ್ಟಿಕ್, ರಬ್ಬರ್, ಟಯರ್ ಮುಂತಾದ ಘನ ತ್ಯಾಜ್ಯಗಳನ್ನು ಮನೆಯ ಸುತ್ತಮುತ್ತ ರಾಶಿ ಮಾಡದಂತೆ ಎಚ್ಚರ ವಹಿಸುವದರಿಂದ ಸೊಳ್ಳೆಗಳು ಉತ್ಪತ್ತಿಯಾಗುವದಿಲ್ಲ ಎಂದರು.

ಈ ಸಂದರ್ಭ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಯಿಲೆಯ ಕುರಿತು ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರನ್ನು ಜಾಗೃತಿಗೊಳಿಸಿದರು. ಶಾಲೆಯ ಶಿಕ್ಷಕರು ಮತ್ತು ಎಸ್‍ಡಿಎಂಸಿ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಶಿವಪ್ರಕಾಶ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸಿದ್ದಲಿಂಗಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಈರಪ್ಪ ಮಡಿವಾಳ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು

- ದಿನೇಶ್ ಮಾಲಂಬಿ.