ಸೋಮವಾರಪೇಟೆ, ಆ. 6: ಮನೆಯ ಮುಂಭಾಗ ಬೆಳೆಯಲಾಗಿದ್ದ ಬಾಳೆ ತೋಟಕ್ಕೆ ಕಾಡಾನೆಗಳು ಧಾಳಿ ನಡೆಸಿ, ಹೈಬ್ರೀಡ್ ತಳಿಯ ಬಾಳೆ ಗಿಡಗಳನ್ನು ಧ್ವಂಸ ಮಾಡಿರುವ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ.

ಬೇಳೂರು ಗ್ರಾಮದ ಶ್ರೀಕಂಠ ಅವರ ಮನೆಯ ಮುಂಭಾಗ ಬೆಳೆದಿದ್ದ ಬಾಳೆ ತೋಟಕ್ಕೆ ಧಾಳಿ ನಡೆಸಿದ ಕಾಡಾನೆಗಳು ಬಾಳೆ, ಪಪ್ಪಾಯಿ ಸೇರಿದಂತೆ ಇನ್ನಿತರ ಗಿಡಗಳನ್ನು ಧ್ವಂಸ ಮಾಡಿವೆ. ಕಾಡಾನೆಗಳನ್ನು ಕಂಡು ನಾಯಿಗಳು ಬೊಗಳಿದಾಗ ನಾಯಿಗಳನ್ನೇ ಕಾಡಾನೆಗಳು ಅಟ್ಟಿಸಿಕೊಂಡು ಹೋಗಿದ್ದು, ಮನೆಯ ಮಾಲೀಕರು ಹೊರಬಾರದೇ ಮನೆಯೊಳಗೆ ಜೀವಭಯದಿಂದ ದಿನದೂಡಿದ್ದಾರೆ.

ಕಳೆದ ವಾರವಷ್ಟೇ ಬೇಳೂರು ಬಾಣೆಯ ಸುರೇಶ್ ಅವರ ಮನೆಯ ಮುಂಭಾಗ ಕಂಡುಬಂದ ಆನೆಗಳು ತೆಂಗಿನ ಮರಗಳನ್ನು ಬೀಳಿಸಿ, ಕಾಫಿ ಗಿಡಗಳನ್ನು ನಷ್ಟಪಡಿಸಿದ್ದವು. ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಶ್ರೀಕಂಠ ಅವರು ಒತ್ತಾಯಿಸಿದ್ದಾರೆ.