ಶ್ರೀಮಂಗಲ, ಆ. 7 : ಕೊಡವ ಜನಾಂಗಕ್ಕೆ ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವತ್ತ ಕೊಡವರು ಸಂಘಟಿತ ರಾಗಿ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ನಿವೃತ್ತ ಪ್ರಾಂಶುಪಾಲ ಮುಂಡ್ಯೋಳಂಡ ನಂಜುಂಡ ಪ್ರತಿಪಾದಿಸಿದರು.

ಕುಟ್ಟ ಕೊಡವ ಸಮಾಜದಲ್ಲಿ ನಡೆದ ‘ಕಕ್ಕಡ ನಮ್ಮೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಸಿಗುತ್ತಿದ್ದು, ಇದರ ಲಭ ಪಡೆದುಕೊಳ್ಳಲು ಉನ್ನತ ಜಾತಿ ಎನಿಸಿಕೊಂಡಿರುವ ಜನಾಂಗಗಳು ಕೋಟಿ ಗಟ್ಟಲೆ ಜನಸಂಖ್ಯೆ ಇದ್ದರೂ ಮೀಸಲಾತಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಕೊಡವ ಜನಾಂಗದ ಜನಸಂಖ್ಯೆ ಅತ್ಯಂತ ಕಡಿಮೆ ಇದ್ದರೂ, ಪ್ರಪಂಚ ಖ್ಯಾತಿಯ ವಿಶಿಷ್ಟ ಪೂರ್ಣ ಸಂಸ್ಕøತಿ ಹಾಗೂ ಭಾಷೆ ಹೊಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನದೊಂದಿಗೆ ವಿಶೇಷ ಮೀಸಲಾತಿ ಹೊಂದಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪಾಸ್ತ್ತಾವಿಕ ಮಾತನಾಡಿದ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಸಮಾಜಗಳ ಒಕ್ಕೂಟಗಳ ಅಧ್ಯಕ್ಷರೂ ಆದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು, ಕೃಷಿ ಪ್ರಧಾನ ಕೊಡಗು ಜಿಲ್ಲೆಯಲ್ಲಿ ಕೃಷಿಯನ್ನೇ ಅವಲಂಬಿಸಿರುವ ಕೊಡವ ಜನಾಂಗಕ್ಕೆ ‘ಕಕ್ಕಡ’ ತಿಂಗಳು ವಿಶೇಷವಾದದ್ದು. ವರ್ಷದ ಅನ್ನಕ್ಕಾಗಿ ಬಿಡುವಿಲ್ಲದೆ ದುಡಿಯುವ ಹಲವು ವಿಶೇಷ ತಿನಿಸುಗಳನ್ನು ಸೇವಿಸುವ ವಿಶಿಷ್ಟತೆಯನ್ನು ಕಾಣುವ ಈ ತಿಂಗಳಲ್ಲಿ ಸಂಭ್ರಮಿಸುವ ಸಲುವಾಗಿ ‘ಕಕ್ಕಡ ನಮ್ಮೆ’ಯನ್ನು ಕಳೆದ ಕೆಲವು ವರ್ಷಗಳಿಂದ ಕುಟ್ಟ ಕೊಡವ ಸಮಾಜ ಆಯೋಜಿಸುತ್ತಿದೆ. ‘ಕಕ್ಕಡ ನಮ್ಮೆ’ಯ ನೆಪದಲ್ಲಿ ನಾಡಿನ ಎಲ್ಲರೂ ಒಂದಾಗಿ ಸೇರಿ ತಮ್ಮಲ್ಲಿರುವ ಖಾದ್ಯ ಮತ್ತು ವಿವಿಧ ವಸ್ತುಗಳನ್ನು ತಯಾರಿಸುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ವ್ಯಾಪಾರದಲ್ಲೂ ಅಭಿವೃದ್ಧಿ ಸಾಧಿಸಲು ವೇದಿಕೆ ಕಲ್ಪಿಸಿಕೊಡುವ ಸಲುವಾಗಿ, ಕೃಷಿ ಹಾಗೂ ತೋಟ ಗಾರಿಕೆ ಸೇರಿದಂತೆ ವಿವಿಧ ವಿಚಾರಗಳ ಮಾಹಿತಿ ನೀಡಲು ಈ ನಮ್ಮೆಯನ್ನು ಆಚರಿಸುತ್ತಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಟಿ.ಶೆಟ್ಟಿಗೇರಿ ಕೊಡವ ಸಮಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಮಾತನಾಡಿ, ನಾವು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೆ ಮಧÀ್ಯವರ್ತಿಗಳ ಪಾಲಾಗುತ್ತಿದೆ. ಗೊಬ್ಬರದ ಬೆಲೆ ಹೆಚ್ಚಳ ಸೇರಿದಂತೆ ನಿರ್ವಹಣ ವೆಚ್ಚ ಹೆಚ್ಚುತ್ತಿದ್ದು, ರೈತ ಸಾಲಗಾರನಾಗಿಯೇ ಜೀವನ ಸಾಗಿಸುವಂತಾಗಿದೆ. ರೈತರಿಗೆ ನೇರವಾಗಿ ದರ ಸಿಗುವಂತಾಗಲು ರೈತರ ಅಭಿವೃದ್ಧಿಗಾಗಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಪುತ್ತರಿ ರೈತ ಉತ್ಪಾದಕರ ಸಂಸ್ಥೆ’ಯನ್ನು ಆರಂಭಿಸಲಾಗಿದೆ. ಎಲ್ಲಾ ರೈತರು ಇದರ ಸದಸ್ಯತ್ವ ಪಡೆದು ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಸ್ವಾರಸ್ಯ ಸಾರಿದ ವಿಶೇಷ ಖಾದ್ಯ

ಕೊಡವ ಸಾಂಪ್ರದಾಯಿಕ ತಿನಿಸುಗಳು ಸೇರಿದಂತೆ ವಿವಿಧ ರೀತಿಯ ಖಾದ್ಯಗಳು, ಜೇನು ತುಪ್ಪ, ಕಾಚಂಪುಳಿ, ಸ್ಥಳೀಯವಾಗಿ ನೇಯ್ದ ಬಟ್ಟೆ, ಪುರಾತನ ವಸ್ತುಗಳು, ಆಭರಣ ಗಳು, ವಾಹನ, ಯಂತ್ರೋಪಕರಣ, ಗೊಬ್ಬರ, ರೈತಪರ ಸಂಸ್ಥೆಗಳು, ಅಲಂಕಾರಿಕಾ ವಸ್ತುಗಳು, ಅರ್ಟ್ ಆಫ್ ಲಿವಿಂಗ್‍ನ ಉತ್ಪನ್ನಗಳು, ಪುಸ್ತಕಗಳು ಸೇರಿದಂತೆ 30ಕ್ಕೂ ಹೆಚ್ಚು ವಿಧದ ಮಳಿಗೆಗಳು ‘ಕಕ್ಕಡ ನಮ್ಮೆ’ಯಲ್ಲಿ ಆಕರ್ಷಣೆ ಹೆಚ್ಚಿಸಿದ್ದವು. ಇದಲ್ಲದೆ ಕ್ರೀಡಾ ಚಟುವಟಿಕೆ, ಮನೋರಂಜನೆ ಕಾರ್ಯಕ್ರಮ ನಡೆಯಿತು. ‘ಕಕ್ಕಡ ನಮ್ಮೆ’ಯಲ್ಲಿ ಭಾಗವಹಿಸಿದವರನ್ನು ಘಮಘÀಮಿಸುವ ‘ಮದ್ದ್ ಪಾಯಸ’ ಹಾಗೂ ಕೊಡವ ಸಾಂಪ್ರದಾಯಿಕ ತಿನಿಸುಗಳು ಸ್ವಾಗತಿಸಿದವು.

ನಮ್ಮೆಯ ಉದ್ಘಾಟನೆಯ ಸಂದರ್ಭ ಕುಟ್ಟ ಕೊಡವ ಸಮಾಜದ ಪದಾಧಿಕಾರಿಗಳು ತೀತಿರ ಮಂದಣ್ಣ, ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕೋಳೇರ ಲೀಲಾ ಅಪ್ಪಣ್ಣ, ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ತೀತಿರ ಕಬಿರ್ ತಿಮ್ಮಯ್ಯ, ಮಚ್ಚಮಾಡ ಪ್ರಕಾಶ್, ನವ್ಯಾ ಪ್ರಕಾಶ್, ಕೊಂಗಂಡ ಸುರೇಶ್ ದೇವಯ್ಯ, ಚೆಪ್ಪುಡಿರ ಪಾರ್ಥ, ಕೇಚಮಾಡ ವಾಸು ಉತ್ತಪ್ಪ, ತೀತಿರ ಕುಶಿ ಅಪ್ಪಣ್ಣ, ಚಕ್ಕೇರ ರಾಬಿನ್, ಕಳ್ಳಂಗಡ ಅಪ್ಪಣ್ಣ ಮತ್ತಿತರರು ಹಾಜರಿದ್ದರು.