*ಗೋಣಿಕೊಪ್ಪಲು, ಆ. 7: ಕಳೆದ 30 ವರ್ಷಗಳಿಂದ ಬೀದಿ ದೀಪ ಇಲ್ಲದೆ ಕತ್ತಲೆ ಆವರಿಸಿದ್ದ ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ, ಕಾಯಂಬೆಟ್ಟ, ಕೋಟೆಬೆಟ್ಟ ಮಾರ್ಗಕ್ಕೆ ಕೊನೆಗೂ ಶಾಸಕ ಕೆ.ಜಿ. ಬೋಪಯ್ಯ ಬೀದಿ ದೀಪಕ್ಕೆ ಚಾಲನೆ ನೀಡುವ ಮೂಲಕ ಬೆಳಕು ಸಿಗುವಂತಾಗಿದೆ.

14ರ ಹಣಕಾಸು ಯೋಜನೆಯಲ್ಲಿ ಒಂದು ಲಕ್ಷ ವೆಚ್ಚದಲ್ಲಿ 23 ಕಂಬಗಳನ್ನು ಅಳವಡಿಸಿ ಈ ಮಾರ್ಗಕ್ಕೆ ಬೀದಿ ದೀಪವನ್ನು ಅಳವಡಿಸಲು ಪಂಚಾಯಿತಿ ಮುಂದಾಗಿದೆ. ಈ ಭಾಗದ ಜನರಿಗೆ ವಿದ್ಯುತ್ ಬೆಳಕು ಲಭಿಸಿ ನಿತ್ಯ ಈ ಮಾರ್ಗವಾಗಿ ಕತ್ತಲೆಯಲ್ಲಿ ಸಂಚರಿಸುವಾಗ ಆನೆ ಸಮಸ್ಯೆಯಿಂದ ಉಂಟಾಗುತ್ತಿದ್ದ ಅನಾಹುತಗಳು ತಪ್ಪಿದಂತಾಗಿದೆ.

ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಬೀದಿ ದೀಪ ಅಳವಡಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪಂಚಾಯಿತಿ ಕ್ರಮ ಕೈಗೊಂಡು ಬೀದಿ ದೀಪ ಅಳವಡಿಸಲು ಮುಂದಾಗಿರುವದರಿಂದ ಈ ಭಾಗದ ಜನರಿಗೆ ಸಹಾಯವಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಜಿಲ್ಲಾ ಬಿ.ಜೆ.ಪಿ. ವರ್ತಕ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಮಾತನಾಡಿ, ಪಂಚಾಯಿತಿಯ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ದಿಗೆ ಪೂರಕ ವಾತಾವರಣ ನಿರ್ಮಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು ಅವರ ಅಭಿವೃದ್ದಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು

ಈ ಸಂಧರ್ಭ ದೇವರಪುರ ಗ್ರಾ.ಪಂ. ಅಧ್ಯಕ್ಷ ವಸಂತ್, ಉಪಾಧ್ಯಕ್ಷೆ ರತಿ, ಸದಸ್ಯರುಗಳಾದ ಎ.ಆರ್. ವಾಸು, ಕಿರಣ್ ಕುಮಾರ್, ಬಸವಂತ್, ರಾಣಿ, ರಾಜು, ದಿನೇಶ್, ಪಿ.ಡಿ.ಒ ಮೋಹನ್, ಜಿ.ಪಂ. ಸದಸ್ಯೆ ಪಂಕಜ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ತಾಲೂಕು ಫೆಡರೇಷನ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಬಿ.ಜೆ.ಪಿ. ತಾಲೂಕು ಘಟಕ ಕಾರ್ಯದರ್ಶಿ ಮನೆಯಪಂಡ ಮಹೇಶ್ ಹಾಜರಿದ್ದರು.