ಸೋಮವಾರಪೇಟೆ,ಆ.6: ಇಲ್ಲಿನ ವಿದ್ಯುತ್ ಪ್ರಸರಣಾ ಕೇಂದ್ರದಿಂದ ಐಗೂರು ಗ್ರಾಮದ ಕಡೆಗೆ ಸರಬರಾಜಾಗುವ 11 ಕೆ.ವಿ. ಸಾಮಥ್ರ್ಯದ ವಿದ್ಯುತ್ ಲೈನ್ ತುಂಡಾಗಿ ಎಲ್.ಟಿ. ಲೈನ್ ಮೇಲೆ ಬಿದ್ದ ಪರಿಣಾಮ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳು ಸುಟ್ಟು ಭಸ್ಮವಾಗಿದೆ.ವಿದ್ಯುತ್ ಕೇಂದ್ರದಿಂದ ಐಗೂರಿಗೆ ಸರಬರಾಜಾಗುವ 11 ಕೆ.ವಿ. ವಿದ್ಯುತ್ ಲೈನ್ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಬಜೆಗುಂಡಿ ಗ್ರಾಮದಲ್ಲಿ ತುಂಡಾಗಿದ್ದು, ಕೆಳಭಾಗದಲ್ಲಿ ಅಳವಡಿಸಿದ್ದ ಎಲ್.ಟಿ. ಲೈನ್ ಮೇಲೆ ಬಿದ್ದಿದೆ. ಪರಿಣಾಮ 440 ಕೆ.ವಿ. ಸಾಮಥ್ರ್ಯ ಹೊಂದಿರುವ ವಿದ್ಯುತ್ ಮಾರ್ಗದಲ್ಲಿ ಒಮ್ಮಿಂದೊಮ್ಮೆಲೆ 11 ಸಾವಿರ ಕೆ.ವಿ.ಯಷ್ಟು ವಿದ್ಯುತ್ ಪ್ರವಹಿಸಿದ್ದು, ಈ ಲೈನ್‍ನಿಂದ ಸಂಪರ್ಕ ಪಡೆದಿದ್ದ ಸುಮಾರು 50ಕ್ಕೂ ಅಧಿಕ ಮನೆಗಳ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ.
ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ನಗರೂರು ಗ್ರಾಮದ ಎಸ್.ಎಲ್. ಶಂಕರ್ ಅವರ ಮನೆಗೆ ಗಂಭೀರ ಪ್ರಮಾಣದ ನಷ್ಟವಾಗಿದ್ದು, ಮನೆಯೊಳಗಿದ್ದ ಸುಮಾರು 6ಲಕ್ಷ ಮೌಲ್ಯದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ.
ಶಂಕರ್ ಅವರ ಮನೆಯ ವಿದ್ಯುತ್ ಮೀಟರ್ ಬೋರ್ಡ್ ಸುಟ್ಟುಹೋಗಿ ಒಮ್ಮಿಂದೊಮ್ಮೆಲೆ ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಮನೆಯೊಳಗಿದ್ದ 60 ಸಾವಿರ ಮೌಲ್ಯದ ಟಿ.ವಿ., 1ಲಕ್ಷ ಮೌಲ್ಯದ ಪೀಠೋಪಕರಣಗಳು, 50 ಸಾವಿರ ಮೌಲ್ಯದ ಗೀಸರ್‍ಗಳು, 1.50 ಲಕ್ಷ ಖರ್ಚಿನಲ್ಲಿ ಮನೆಗೆ ಅಳವಡಿಸಿದ್ದ ವಯರಿಂಗ್, 3ಲಕ್ಷ ವೆಚ್ಚದಲ್ಲಿ ಮಾಡಲಾಗಿದ್ದ ಸುಣ್ಣಬಣ್ಣ ಸೇರಿದಂತೆ ಇನ್ನಿತರ ವಸ್ತುಗಳು ನಷ್ಟವಾಗಿವೆ.
ಮನೆಯ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಬಂಗಲೆಯಂತಿರುವ ಮನೆಗೆ ಮಸಿ ಬಳಿದಂತಾಗಿದೆ. ಶಾರ್ಟ್ ಸಕ್ರ್ಯೂಟ್ ಸಂದರ್ಭ ಶಂಕರ್ ಅವರ ತಾಯಿ ಜಲಜಾಕ್ಷಿ ಅವರು ಮನೆಯ ಕೆಳ ಮಹಡಿಯಲ್ಲಿದ್ದರಿಂದ ಪ್ರಾಣಹಾನಿ ತಪ್ಪಿದೆ. ವಿಷಯ ತಿಳಿದ ಶಂಕರ್ ತಕ್ಷಣ ಮನೆಗೆ ಆಗಮಿಸಿ ಕೊಠಡಿಯ ಕಿಟಕಿಗಳನ್ನು ಒಡೆದಿದ್ದರಿಂದ ಸ್ಫೋಟದಂತಹ ಭೀಕರತೆ ತಪ್ಪಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.