ಮಡಿಕೇರಿ, ಆ. 6: ಚೆಯ್ಯಂಡಾಣೆಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕೇಳಿ ಬರುತ್ತಿರುವ ಗೊಬ್ಬರ ಮೂಟೆಗಳ ದುರುಪಯೋಗ ಹಗರಣವು ಕಳೆದ ಹತ್ತು ವರ್ಷಗಳ ಅವಧಿಯಿಂದಲೇ ನಡೆದು ಬಂದಿರುವ ಸುಳಿವು ಲಭಿಸಿದೆ.ಪ್ರಸಕ್ತ ಆಡಳಿತ ಮಂಡಳಿಯ ಪ್ರಮುಖರು ಈ ಸಂಬಂಧ ವಿಎಸ್‍ಎಸ್‍ಎನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿರುದ್ಧ, ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರಿಗೆ ದೂರು ನೀಡಿರುವ ಸಂದರ್ಭ ಈ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ಕಳೆದ ಅನೇಕ ವರ್ಷಗಳಿಂದ ವಿಎಸ್‍ಎಸ್‍ಎನ್‍ನಲ್ಲಿ ನಡೆಸಲಾಗಿರುವ ವಾರ್ಷಿಕ ಲೆಕ್ಕಪತ್ರ ತಪಾಸಣಾ ವರದಿಗಳಲ್ಲಿ ಸಂಬಂಧಪಟ್ಟವರು ನೈಜಾಂಶವನ್ನು ಮರೆಮಾಚಿಡುವದು ಬಹಿರಂಗಗೊಂಡಿದೆ. ಉದಾಹರಣೆಗೆ ಲೆಕ್ಕ ತಪಾಸಣೆ ನಡೆಸುವ ಸಂದರ್ಭ, ಕಡತಗಳಲ್ಲಿ ನಮೂದಾಗಿರುವ ಗೊಬ್ಬರ ದಾಸ್ತಾನು ಮಾಹಿತಿಯಲ್ಲಿ, ಸಾವಿರಾರು ಮೂಟೆಗಳ ಗೊಬ್ಬರ ಗೋದಾಮುವಿನಲ್ಲಿ ಇರುವದಾಗಿ ನಮೂದಾಗಿದೆ ಎಂದು ತಿಳಿದು ಬಂದಿದೆ.

ಹೀಗೆ ಚೆಯ್ಯಂಡಾಣೆ ವಿಎಸ್‍ಎಸ್‍ಎನ್ ಕಟ್ಟಡದ ಗೋದಾಮುವಿನಲ್ಲಿ ಸಾವಿರಾರು ಮೂಟೆ ದಾಸ್ತಾನು ಇರುವಾಗ, ಮತ್ತೆ ಮತ್ತೆ ಖರೀದಿಸಿರುವ ಉದ್ದೇಶ ಮತ್ತು ಹಣ ಪಾವತಿಯ ಕುರಿತು ಲೆಕ್ಕ ತಪಾಸಣೆ ನಡೆಸಿರುವವರು ಎಲ್ಲಿಯೂ ಆಕ್ಷೇಪಿಸದಿರುವದು ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಅಲ್ಲದೆ, ಪ್ರಸಕ್ತ ವಿಎಸ್‍ಎಸ್‍ಎನ್ ಆಡಳಿತ ಮಂಡಳಿಗೆ ಆಯ್ಕೆಗೊಂಡಿರುವ ಯುವಕರ ತಂಡವೊಂದು, ನೂತನ ಮಂಡಳಿ ಅಧಿಕಾರ ಗ್ರಹಣ ಮಾಡುವ ವೇಳೆ, ಸಂಘದ ದಾಸ್ತಾನು ಪರಿಶೀಲನೆಗೆ ಕೋರಿದ್ದರಿಂದ ಈ ಹಗರಣ ಬಹಿರಂಗಗೊಂಡಿದ್ದು, ದಶಕಗಳ ಹಿಂದಿನ ಸಾವಿರಾರು ಮೂಟೆ ಗೊಬ್ಬರ ಚೀಲಗಳು ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಅಥವಾ ದುರುಪಯೋಗದಿಂದ ಇದೀಗ 14 ಸಾವಿರ ಮೂಟೆಗಳಿಗೂ ಅಧಿಕ ತಲಪುವಂತಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಪೊಲೀಸ್ ಇಲಾಖೆ ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸುತ್ತಿದ್ದರೂ, ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಲೆಕ್ಕ ತಪಾಸಣೆ ನಡೆಸುತ್ತಿರುವವರು ಮೇಲಿನ ಹಗರಣ ಸಂಬಂಧ ಹುಟ್ಟಿಕೊಂಡಿರುವ ಸಂಶಯಗಳಿಗೆ ಉತ್ತರಿಸಬೇಕಿದೆ.

ಇನ್ನು ಕೆಲ ಕಾಲಕ್ಕೆ ನಿರ್ದೇಶಕರುಗಳು ಚುನಾವಣಾ ಸಂದರ್ಭ ಹೊಸಬರು ಸೇರ್ಪಡೆಗೊಂಡಿದ್ದು, ಸುದೀರ್ಘ ಅವಧಿಯ ಅಧ್ಯಕ್ಷರು ಹಾಗೂ ಬಹುತೇಕ ಸಿಬ್ಬಂದಿ ಹಾಲಿ ಕಾರ್ಯನಿರ್ವಹಿಸುವವರೇ ಆಗಿದ್ದು, ಹಗರಣ ಸಾಕಷ್ಟು ಕುತೂಹಲ ಪಡೆದುಕೊಂಡಿದೆ.