ಮಡಿಕೇರಿ, ಆ. 7: ನಗರ ಸಭೆಯ ಸದಸ್ಯರು ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮತ್ತು ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಲೀಲಾ ಶೇಷಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಕ್ಷದಿಂದ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಸುಳಿವು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ನಗರಸಭೆಯ ಸದಸ್ಯರಾಗಿದ್ದುಕೊಂಡು, ಜಾತ್ಯಾತೀತ ಜನತಾದಳ ಸಭೆಗಳಲ್ಲಿ ಭಾಗವಹಿಸುವ ಮುಖಾಂತರ, ಕಾಂಗ್ರೆಸ್ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಶಿವು ಮಾದಪ್ಪ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ. ಈ ಇಬ್ಬರು ಸದಸ್ಯರು ಪಕ್ಷದ ನೋಟೀಸ್‍ಗೆ ಉತ್ತರ ನೀಡಿದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ನುಡಿದ ಅವರು, ಯಾರೊಬ್ಬರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ, ಗಂಭೀರವಾಗಿ ಪರಿಗಣಿಸಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.

ಇಬ್ಬರು ಸದಸ್ಯರುಗಳ ವಿರುದ್ಧ ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೇಳಿರುವದಾಗಿ ತಿಳಿಸಿದ ಜಿಲ್ಲಾಧ್ಯಕ್ಷರು, ಅಗತ್ಯ ಬಿದ್ದರೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೆ.ಎಂ. ಗಣೇಶ್ ಹಾಗೂ ಲೀಲಾ ಶೇಷಮ್ಮ ಇವರುಗಳ ನಗರಸಭಾ ಸದಸ್ಯತ್ವ ರದ್ಧತಿಗೆ ಕೋರಲಾಗುವದು ಎಂದು ಮುನ್ಸೂಚನೆ ನೀಡಿದ್ದಾರೆ.

ಲೀಲಾ ಪ್ರತಿಕ್ರಿಯೆ : ಲೀಲಾ ಶೇಷಮ್ಮ ಅವರ ಅಭಿಪ್ರಾಯ ಬಯಸಿದಾಗ, ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನದಂತೆ ಪ್ರಧಾನ ಕಾರ್ಯದರ್ಶಿಗಳು ತನಗೆ ನೋಟೀಸ್ ಜಾರಿಗೊಳಿಸಿದ್ದು, ಇನ್ನೆರಡು ದಿನದೊಳಗೆ ಸೂಕ್ತ ಉತ್ತರ ನೀಡಲಿರುವದಾಗಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ, ಮುಗುಳುನಗೆ ಬೀರಿದ ಲೀಲಾ ಶೇಷಮ್ಮ ‘ಕಾದು ನೋಡಿ’ ಎಂದಷ್ಟೇ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.

ಕೆ.ಎಂ. ಗಣೇಶ್ ಉತ್ತರ : ಕಾಂಗ್ರೆಸ್ ಪಕ್ಷ ತನಗೆ ನೋಟೀಸ್ ಜಾರಿಗೊಳಿಸಿದ್ದನ್ನು ಖಾತರಿ ಪಡಿಸಿದ ನಗರಸಭಾ ಸದಸ್ಯ ಕೆ.ಎಂ. ಗಣೇಶ್ ಅವರು, ಈಗಾಗಲೇ ತಾನು ಪಕ್ಷದ ನೋಟೀಸ್‍ಗೆ ಪ್ರತ್ಯುತ್ತರ ನೀಡಿರುವ ದಾಗಿ ‘ಶಕ್ತಿ’ಯೊಂದಿಗೆ ಖಚಿತ ಪಡಿಸಿದ್ದಾರೆ. ತಾನು ಪಕ್ಷಕ್ಕಾಗಿ ಎರಡು ದಶಕಗಳಿಂದ ಪ್ರಾಮಾಣಿಕ ನೆಲೆಯಲ್ಲಿ ಶ್ರಮಿಸಿದ್ದಲ್ಲದೆ, ಸ್ಥಳೀಯ ಸಂಸ್ಥೆಯಲ್ಲಿ ಜನಬೆಂಬಲದಿಂದ ಗೆಲುವು ಸಾಧಿಸಿದ್ದಾಗಿ ಪ್ರತ್ಯುತ್ತರ ನೀಡಿರುವ ದಾಗಿ ಖಚಿತಪಡಿಸಿದ್ದಾರೆ. ಒಂದು ವೇಳೆ ತನ್ನ ವಿರುದ್ಧ ಕಾಂಗ್ರೆಸ್ ಪಕ್ಷವು ಕಾನೂನು ಕ್ರಮ ಜರುಗಿಸಿದರೆ, ಅದಕ್ಕೆ ಕಾನೂನಿನಡಿ ಉತ್ತರಿಸಲು ಬದ್ಧವಿರುವ ದಾಗಿ ತಿಳಿಸಿದ ಅವರು, ಮುಂದಿನ ಎಲ್ಲಾ ಪರಿಣಾಮಗಳಿಗೆ ಸಂಬಂಧ ಪಟ್ಟವರೇ ಜವಾಬ್ದಾರರು ಎಂದು ‘ಶಕ್ತಿ’ ಯೊಂದಿಗೆ ನಿಲುವು ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷೆ ಮೌನ: ನಗರಸಭಾ ಸದಸ್ಯರಿಬ್ಬರ ವಿರುದ್ಧ ಕಾಂಗ್ರೆಸ್ ನೋಟೀಸ್ ಜಾರಿಗೊಳಿಸಿರುವ ಬಗ್ಗೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಯಾವದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸದ್ಯದ ಯಾವದೇ ವಿದ್ಯಮಾನಗಳ ಕುರಿತು ತಾನು ಹೇಳಿಕೆ ನೀಡುವದಿಲ್ಲವೆಂದು ‘ಶಕ್ತಿ’ಯೊಂದಿಗೆ ಸೂಚ್ಯವಾಗಿ ನುಡಿದರು.