ಸುಂಟಿಕೊಪ್ಪ, ಆ. 6: ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆಯಲ್ಲಿ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಭಾಗವಹಿಸಿದ್ದರು.ಜಂಬೂರುಬಾಣೆಯ ಸರಕಾರಿ ಪ್ರೌಢಶಾಲಾ ಮೈದಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚು ಮಂದಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮಹಿಳೆಯರು, ಮಕ್ಕಳು, ವಯೋವೃದ್ಧರು, ಯುವಕ, ಯವತಿಯರು ಜಡಿ ಮಳೆಯ ನಡುವೆಯೂ ಘೋಷಣೆಗಳನ್ನು ಕೂಗುತ್ತಾ ಮಾದಾಪುರ ಪಟ್ಟಣದವರೆಗೆ ಸಾಗಿ ಬಂದರು.

ನಂತರ ಜೆಎಸ್‍ಎಸ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕರಾದ ಜಗದೀಶ್ ಕಾರಂತ್ ದೇಶದ ಐಕ್ಯತೆ ಭಂಗ ತರುವ ದುಷ್ಟಶಕ್ತಿಗಳ ವಿರುದ್ಧ ಜಾಗೃತರಾಗಿರಬೇಕು. ಹಿಂದೂಗಳ ಒಗ್ಗಟ್ಟಿನಿಂದ ಮಾತ್ರ ಭಾರತದ ಅಳಿವು ಉಳಿವು ಆಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಎಸ್ಪಿ ಪೂಣ್ಣಚ್ಚ ಮಾತನಾಡಿ ಅಖಂಡ ಭಾರತದ ಭದ್ರತೆಗೆ ಯುವಜನಾಂಗದ ಪಾತ್ರ ಮಹತ್ವದಾಗಿದ್ದು ದೇಶ ಭಕ್ತಿಯಿಂದ ಹಿಂದೂ ರಾಷ್ಟ್ರದ ಸಂಸ್ಕøತಿ ಪರಂಪರೆ ಆಚರಣೆಯನ್ನು ಉಳಿಸಲು ಪ್ರತಿಯೊಬ್ಬರು ಕಟಿಬದ್ಧರಾಗ ಬೇಕೆಂದರು. ಆರ್‍ಎಸ್‍ಎಸ್ ಕಾರ್ಯ ನಿರ್ವಾಹಕ ಡಾಲಿ ಪ್ರಾರ್ಥಿಸಿ, ಕೇಶವ ವಂದಿಸಿದರು. ಸೋಮವಾರಪೇಟೆ ಡಿವೈಎಸ್‍ಪಿ ಸಂಪತ್‍ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.